ಯಲ್ಲಾಪುರ: ಮಾರ್ಚ 8ರಂದು ಲೋಕ ಅದಾಲತ್ ಇರುವ ಕಾರಣ ಹೆಚ್ಚು ಪ್ರಕರಣ ಇತ್ಯರ್ಥವಾಗುವಂತೆ ಎಲ್ಲ ಇಲಾಖೆಗಳು ಸಹಕರಿಸಬೇಕು. ಆರ್ಥಿಕ ಸಂಸ್ಥೆಗಳು ಬಡ್ಡಿ ರಿಯಾಯತಿ ನೀಡುವ ಮೂಲಕ ಪ್ರಕರಣಗಳು ಇತ್ಯರ್ಥವಾಗುವಂತೆ ಸಹಕರಿಸಬೇಕು. ಪಾರ್ಟಿಷನ್ ಸೂಟ್‌ಗಳಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವಂತೆ ವಕೀಲರು ಕಕ್ಷಿದಾರರ ಮನವೊಲಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾದೀಶ ಜಿ.ಬಿ.ಹಳ್ಳಾಕಾಯಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಿವಿಲ್ ನ್ಯಾಯಾದೀಶೆ ಲಕ್ಷ್ಮೀಬಾಯಿ ಪಾಟೀಲ ಮಾತನಾಡಿ, ‘ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿದರೆ ಕಕ್ಷಿದಾರನ ನ್ಯಾಯಾಲಯದ ಸಮಯ ಹಣ ಉಳಿತಾಯವಾಗುವುದರ ಒಳಗೆ ತ್ವರಿತ ನ್ಯಾಯ ಸಿಗಲು ಸಹಕಾರಿಯಾಗುತ್ತದೆ. ಕಕ್ಷಿದಾರರಿಗೆ ತಿಳಿಸಿ ಹೇಳಿ ಮನ ಒಲಿಸುವ ಪ್ರಯತ್ನವನ್ನು ವಕೀಲರು ಮಾಡಬೇಕು. ಒಮ್ಮೆ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥವಾದಲ್ಲಿ ಅಪೀಲಿಗೆ ಹೋಗುವ ಅವಕಾಶವೂ ಇರುವುದಿಲ್ಲ. ಇದರಿಂದ ಸಮಯದ ಉಳಿತಾಯವಾಗುತ್ತದೆ’ ಎಂದರು.
ಎಜಿಪಿ ಎನ್.ಟಿ.ಗಾಂವ್ಕರ್, ಪಿ.ಎಸ್.ಐ. ಸಿದ್ದಪ್ಪ ಗುಡಿ, ಸಿಡಿಪಿಓ ಶ್ರೀದೇವಿ ಪಾಟೀಲ, ಎಪಿಪಿ ಜೀನತ್ ಅಮಾನ್ ಶೇಖ, ಹಿರಿಯ ವಕೀಲರಾದ ಎನ್.ಆರ್. ಭಟ್ಟ ಕೊಡ್ಲಗದ್ದೆ, ಜಿ.ಎಸ್.ಭಟ್ಟ ಹಳವಳ್ಳಿ, ಆರ್.ಕೆ. ಭಟ್ಟ ಕಿಚ್ಚುಪಾಲ,ಎನ್.ಆರ್.ಭಟ್ಟ ಬಿದ್ರೆಪಾಲ, ಕೆ.ಎನ್.ಹೆಗಡೆ, ಪ್ರಕಾಶ ಭಟ್ಟ, ಜಿ.ವಿ.ಭಾಗ್ವತ್, ತೇಜಸ್ವಿ ಹೆಗಡೆ, ಉಪತಹಶೀಲ್ದಾರ ಫರ್ನಾಂಡಿಸ್, ಪ.ಪಂ. ಆರೋಗ್ಯ ನಿರೀಕ್ಷಣಾಧಿಕಾರಿ ಗುರು ಗಡಗಿ, ವಿವಿದ ಇಲಾಖೆಯ, ಆರ್ಥಿಕ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ಟ ಸ್ವಾಗತಿಸಿದರು, ಕಾನೂನು ಸೇವಾ ಸಮಿತಿಯ ಪ್ಯಾನಲ್ ವಕೀಲೆ ಬೀಬಿ ಅಮೀನಾ ಶೇಖ ವಂದಿಸಿದರು.