ದಾಂಡೇಲಿ: ಜನಪದ ಹಾಡುಗಳ ಕೋಗಿಲೆ ಎಂದೆ ಪ್ರಸಿದ್ಧಿ ಪಡೆದಿದ್ದ ಹಾಗೂ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮುಗೌಡ ಅವರ ಅಗಲುವಿಕೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ತಾವು ಅಂಕೋಲಾದಲ್ಲಿದ್ದಾಗ ಸುಕ್ರಜ್ಜಿಯವರ ಜೊತಗೆ ಭಾಗವಹಿಸಿದ ಹಲವು ಜನಪರ ಚಳುವಳಿ ಹಾಗೂ ಸರಾಯಿ ವಿರೋಧಿ ಅಂದೋಲನದ ಸಂದರ್ಭಗಳನ್ನು ನೆನಪಿಸಿಕೊಂಡಿರುವ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಅವರು ಕೇವಲ ಜನಪದ ಹಾಡುಗಾರ್ತಿಯಾಗಷ್ಟೇ ಇರದೇ ಸಾಮಾಜಿಕ ಹೋರಾಟಗಾರ್ತಿಯೂ ಅಗಿದ್ದರು ಎಂದಿದ್ದಾರೆ.
ಸುಮಾರು 5 ಸಾವಿರಕ್ಕೂ ಹೆಚ್ಚಿನ ಜಾನಪದ ಹಾಡುಗಳು ಅವರ ನಾಲಿಗೆಯಲ್ಲಿ ನಿರರ್ಗಳವಾಗಿದ್ದವು. ಅವರ ಜಾನಪದ ಕಲೆಗೆ ನೀಡಿದ ಕೊಡುಗೆ ಮತ್ತು ಸಾಂಪ್ರದಾಯಿಕ ಬುಡಕಟ್ಟು ಸಂಗೀತವನ್ನು ಸಂರಕ್ಷಿಸುವ ಕಾರ್ಯಕ್ಕಾಗಿ ಮಾಡಿದ ಕೆಲಸ ಅನನ್ಯವಾದುದು. ಹಾಲಕ್ಕಿಗಳನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕು ಎಂಬ ಅವರ ಕನಸು ನನಸಾಗಬೇಕಿದೆ. ಅವರ ಬದುಕನ್ನು ಚಿರಸ್ಥಾಯಿಯಾಗಿಸುವ ಕೆಲಸ ಆಗಬೇಕಿದೆ ಎಂದಿದ್ದಾರೆ.