ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಂತಿ ಬೇಧಿ ಪ್ರಕರಣ ಕಾಣಿಸಿಕೊಂಡ ರಾಜೀವಾಡ ಹಾಗೂ ಮಜ್ಜಿಗೆಹಳ್ಳ ಗ್ರಾಮಸ್ಥರಿಗೆ ಗುರುವಾರವೂ ಚಿಕಿತ್ಸೆ ಮುಂದುವರಿದಿದೆ. ಗುರುವಾರ ಯಾವುದೇ ವಾಂತಿ-ಬೇಧಿ ಪ್ರಕರಣ ಕಂಡು ಬಂದಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು ಗ್ರಾಮದ ಮನೆ ಮನೆಗೆ ಭೇಟಿ ನೀಡಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮುಂದುವರಿಸಿದರು. ಅಲ್ಲದೇ, ಆರೋಗ್ಯದ ಕುರಿತಾಗಿ ಜಾಗೃತಿಯನ್ನೂ ಮೂಡಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅರ್ಚನಾ ನಾಯಕ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಆರೋಗ್ಯ ವಿಚಾರಿಸಿದರು. ಗ್ರಾಮಸ್ಥರ ಆರೋಗ್ಯದ ಕುರಿತು ಸರಿಯಾಗಿ ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ತಾ.ಪಂ ಇಒ ರಾಜೇಶ ಧನವಾಡಕರ್, ಗ್ರಾ.ಪಂ ಅಧ್ಯಕ್ಷೆ ಯಮುನಾ ಸಿದ್ದಿ, ಪಿಡಿಒ ರವಿ ಪಟಗಾರ, ಸಾಂಕ್ರಾಮಿಕ ರೋಗ ತಜ್ಞರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಾಂತಿ-ಬೇಧಿ ಪ್ರಕರಣ: ಮುಂದುವರೆದ ಚಿಕಿತ್ಸಾ ಪ್ರಕ್ರಿಯೆ
