ಹೊನ್ನಾವರ : ಗ್ರಾಮ ಆಡಳಿತ ಅಧಿಕಾರಿಗಳ ಮುಂದುವರಿದ ಮುಷ್ಕರದಿಂದ ತಾಲೂಕಾಡಳಿತದ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಮುಷ್ಕರದಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಒಬಿಸಿ ಪ್ರಮಾಣಪತ್ರ, ಇ.ಡಬ್ಲ್ಯು.ಎಸ್. ಪ್ರಮಾಣಪತ್ರಗಳಿಗೆ ಫೆಬ್ರವರಿ ೧೮ ಕೊನೇಯ ದಿನಾಂಕವಾಗಿದ್ದು ಪ್ರಮಾಣ ಪತ್ರ ಪಡೆಯಲಾಗದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಬ್ಯಾಂಕ್ , ಸೊಸೈಟಿಗಳಿಂದ ಸಾಲ ಪಡೆಯಲು ರೈತರು ಪಹಣಿ ಪತ್ರದಲ್ಲಿ ಭೋಜಾ ದಾಖಲು ಪಹಣಿ ಪತ್ರಿಕೆ ಪಡೆಯಲು ಕಚೇರಿಗೆ ಬಂದು ಸೇವೆ ಸಿಗದೇ ಮರಳುತ್ತಿದ್ದಾರೆ. ಸರಕಾರದ ಸ್ಪಂದನ ಇನ್ನೂ ದೊರೆತಿಲ್ಲವಾಗಿದ್ದು ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ.
ಗ್ರಾಮ ಅಡಳಿತ ಅಧಿಕಾರಿಗಳ ಮುಷ್ಕರಕ್ಕೆ ಸಂಘಟನೆಗಳ ಬೆಂಬಲ :
ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಬೇಡಿಕೆಗಳ ಈಡೇರಿಕಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಕೇಂದ್ರ ಸಂಘದ ಕರೆಯ ಮೇರೆಗೆ ಆರಂಭಿಸಿರುವ ಅನಿರ್ಧಿಷ್ಟಾವಧಿ ಮುಷ್ಕರ ಮೂರನೇ ದಿನ ಬುಧವಾರವೂ ಮುಂದುವರಿದಿದ್ದು ಹಲವು ಸಂಘಟನೆಗಳು ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿವೆ.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿಯ ಎಂ.ಆರ್.ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಡಿ.ಎಂ.ನಾಯ್ಕ, ತಾಲೂಕಾಧ್ಯಕ್ಷ ವಿನಾಯಕ ಹೆಗಡೆ ಮತ್ತು ಪದಾಧಿಕಾರಿಗಳು, ಕರ್ನಾಟಕ ಸರಕಾರಿ ನೌಕರರ ಸಂಘ ತಾಲೂಕಾ ಶಾಖೆಯ ಪದಾಧಿಕಾರಿಗಳು ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.