ಶಿರಸಿ: ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮೇಲೆ ಶಿರಸಿಯ ಕಾಂಗ್ರೆಸ್ ಮುಖಂಡರು ವಿನಾಕಾರಣ ದಾಖಲಿಸಿದ್ದ ಪ್ರಕರಣದ ತನಿಖೆಗೆ, ಶುಕ್ರವಾರ ಧಾರವಾಡದ ಉಚ್ಛ ನ್ಯಾಯಾಲಯ ಮಧ್ಯಂತರ ಆದೇಶದ ಮೂಲಕ ತಡೆಯಾಜ್ಞೆ ನೀಡಿದೆ.
ಶಿರಸಿಯಲ್ಲಿ ಇತ್ತಿಚೆಗೆ ಪತ್ರಿಕಾಗೋಷ್ಟಿಯಲ್ಲಿ ಅನಂತಮೂರ್ತಿ ಹೆಗಡೆ ಅವರು ಮಾತನಾಡಿ, ಆಸ್ಪತ್ರೆಯ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ರೂ. 18.5 ಕೋಟಿಯಷ್ಟು ಹಣ ಬಂದಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು. ಇದು ಸುಳ್ಳಾಗಿದೆ. ಹಾಗಾಗಿ ಅತಿ ಹೆಚ್ಚು ಸುಳ್ಳು ಹೇಳುವ ಶಾಸಕ ಪ್ರಶಸ್ತಿಯನ್ನು ಭೀಮಣ್ಣರಿಗೆ ನೀಡಬಹುದು ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದರು. ಆದರೆ, ಕಾಂಗ್ರೆಸಿಗರು, ಅವರ ಹೇಳಿಕೆಯನ್ನು ತಿರುಚಿ, ಅವರ ಮೇಲೆ ವಿನಾಕಾರಣ ಜಾಮೀನು ರಹಿತ (ನಾನ್ ಬೇಲೆಬಲ್) ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ನಾಯಕ ಅನಂತಮೂರ್ತಿ ಹೆಗಡೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಾದವನ್ನು ಆಲಿಸಿ, ಕೂಲಂಕುಷವಾಗಿ ಪರಿಶೀಲನೆ ನಡೆಸಿದ ನ್ಯಾಯಾಧೀಶರು, ಈ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್ ದಾಖಲಿಸಿದ್ದ ಕೇಸ್ ನ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡುವ ಮೂಲಕ ಅನಂತಮೂರ್ತಿ ಹೆಗಡೆಗೆ ಮೊದಲ ಪ್ರಯತ್ನದಲ್ಲಿ ಜಯ ಲಭಿಸಿದಂತಾಗಿದೆ. ಅನಂತಮೂರ್ತಿ ಹೆಗಡೆ ಪರವಾಗಿ ವಕೀಲ ಸೌರಭ ಹೆಗಡೆ ವಾದ ಮಂಡಿಸಿದ್ದರು.
ಹೈಕೋರ್ಟ್ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ ಅನಂತಮೂರ್ತಿ ಹೆಗಡೆ, ಇದು ಸತ್ಯಕ್ಕೆ, ನ್ಯಾಯಕ್ಕೆ ಸಂದ ಗೆಲುವಾಗಿದೆ. ಅಧಿಕಾರ ದುರುಪಯೋಗ, ದ್ವೇಷ ರಾಜಕಾರಣದಿಂದ ಸತ್ಯ, ನ್ಯಾಯವನ್ನು ಕೊಂಡುಕೊಳ್ಳಲಾಗುವುದಿಲ್ಲ. ನಾನು ಕ್ಷೇತ್ರದ ಬಡ ಜನರ ಆಸ್ಪತ್ರೆಗಾಗಿ ಹೋರಾಟ ಮಾಡುತ್ತಿದ್ದು, ಶಾಸಕರ ಬಳಿ ಸತ್ಯ ಹೇಳಿ ಎಂದು ಕೇಳಿದ್ದಕ್ಕೆ ಪ್ರಕರಣ ದಾಖಲಿಸಿರುವುದು ಹಾಸ್ಯಾಸ್ಪದ. ಜನನಾಯಕರಿಗೆ ಇದು ಶೋಭೆಯಲ್ಲ. ಈಗಲಾದರೂ ಜನರೆದುರು ಸತ್ಯವನ್ನು ಆದಷ್ಟು ಬೇಗನೇ ಶಾಸಕ ಭೀಮಣ್ಣ ನಾಯ್ಕ ಅವರು ಹೇಳುವಂತಾಗಲಿ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.