ಸಿದ್ದಾಪುರ: ಧಾರ್ಮಿಕ ಮನೋಭಾವನೆಯನ್ನು ಸ್ಥಿರಗೊಳಿಸುವ ಶಕ್ತಿ ಕಲೆಗಿದೆ. ಅದರಲ್ಲೂ ಅಚ್ಚ ಕನ್ನಡದ ಮಾತಿನ ಕಲೆಯಾದ ತಾಳಮದ್ದಳೆಯು ಅತ್ಯಂತ ಪ್ರಭಾವಶಾಲಿಯಾಗಿ ಜನರ ಮನವನ್ನು ತಲುಪುತ್ತದೆ. ಇಂತಹ ದೈವೀಶಕ್ತಿಯನ್ನು ಪ್ರಚುರ ಪಡಿಸುವ ಯಕ್ಷಗಾನ ತಾಳಮದ್ದಳೆಗಳನ್ನು ಉಳಿಸಿಕೊಳ್ಳೋಣ ಎಂದು ಹರ್ಷ ಭಟ್ಟ ಕೆರೆಹೊಂಡ ಹೇಳದರು.
ಫೆ.3, ಸೋಮವಾರದಂದು ತಾಲೂಕಿನ ಹಳ್ಳಿಬೈಲು ಭಟ್ಟನಜಡ್ಡಿಯಲ್ಲಿ ಪ್ರವೀಣ ಎಸ್. ಹೆಗಡೆಯವರ ಪ್ರಾಯೋಜಕತ್ವದಲ್ಲಿ ನಡೆದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಜ್ಜನ ಹಾಗೂ ದುರ್ಜನರ ನಡುವೆ ನಡೆಯುವ ತಾಕಲಾಟವು ನಮ್ಮ ಬದುಕಿಗೆ ಪಾಠವಾಗುತ್ತದೆ ಎಂದೂ ಕೂಡ ಅಭಿಪ್ರಾಯ ಪಟ್ಟರು. ನಂತರ ಕಲಾಭಾಸ್ಕರ (ರಿ.) ಇಟಗಿ ಇವರ ಸಂಯೋಜನೆಯಲ್ಲಿ ಕವಿ ಅಗರಿ ಶ್ರೀನಿವಾಸ ಭಾಗವತ ವಿರಚಿತ ಶುಂಭವಧೆ ಎನ್ನು ತಾಳಮದ್ದಳೆಯು ಜರುಗಿತು. ಶುಂಭನಾಗಿ ಜಯರಾಮ ಭಟ್ಟ ಗುಂಜಗೋಡು, ಶ್ರೀದೇವಿಯಾಗಿ ಇಟಗಿ ಮಹಾಬಲೇಶ್ವರ ಭಟ್ಟ, ಸುಗ್ರೀವನಾಗಿ ಎಮ್.ಬಿ.ಹೆಗಡೆ ಹಳೆಹಳ್ಳ, ರಕ್ತಬೀಜನಾಗಿ ಗಣಪತಿ ಹೆಗಡೆ ಗುಂಜಗೋಡು, ಚಂಡಾಸುರನಾಗಿ ವೆಂಕಟೇಶ ಹೆಗಡೆ ಬೊಗರಿಮಕ್ಕಿ, ಮುಂಡಾಸುರನಾಗಿ ಕೌಸ್ತುಭ ಆರ್.ಹೆಗಡೆ ಅಳಗೋಡು ಭಾವಪೂರ್ಣವಾಗಿ ಪ್ರದರ್ಶನವನ್ನು ಕಟ್ಟಿಕೊಟ್ಟರು. ಭಾಗವತ ಗಜಾನನ ಭಟ್ಟ ತುಳಿಗೇರಿಯವರ ಕಂಠಸಿರಿಗೆ ಶ್ರೀಪತಿ ಹೆಗಡೆ ಕಂಚಿಮನೆ ಮದ್ದಳೆಯೊಂದಿಗೆ ಹಿಮ್ಮೇಳದ ವೈಭವವನ್ನು ಹೆಚ್ಚಿಸಿದರು. ತರ್ಕಬದ್ದವಾಗಿ ನಡೆದ ತಾಳಮದ್ದಳೆಯು ಜನರನ್ನು ರಂಜಿಸಿತು.