ಹೊನ್ನಾವರ: ಅಪಾಯಕಾರಿ ಯೋಜನೆಗಳಿಂದ ಜೀವನದಿ ಶರಾವತಿ ಮತ್ತು ಕಣಿವೆಯನ್ನು ಉಳಿಸಲು ಫೆ.3, ಸೋಮವಾರ ಬೆಳಿಗ್ಗೆ 10.30ಕ್ಕೆ ಗೇರುಸೊಪ್ಪೆಯಲ್ಲಿ ಪರಿಸರ ತಜ್ಞರ, ನದಿಪಾತ್ರದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ,ಉಪಾಧ್ಯಕ್ಷ ರ ಉಪಸ್ಥಿತಿಯಲ್ಲಿ ಸ್ಥಳೀಯರ ಸಮಾಲೋಚನಾ ಸಭೆಯೊಂದನ್ನು ಶರಾವತಿ ನದಿ,ಕಣಿವೆ ಉಳಿಸಿ ಹೋರಾಟ ಸಮಿತಿ ಮತ್ತು ನಗರಬಸ್ತಿಕೇರಿ ಗ್ರಾಮ ಪಂಚಾಯತದವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.
ಸಭೆಯಲ್ಲಿ ಉದ್ದೇಶಿಸಿತ ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲ ವಿದ್ಯುತ ಯೋಜನೆಯ ಸಾಧಕ ಭಾದಕಗಳ ಕುರಿತು,ಮತ್ತು ಯೋಜನೆಯಿಂದ ಪರಿಸರ ಸೂಕ್ಷ್ಮ ಶರಾವತಿ ಕಣಿವೆ ಮತ್ತು ಶರಾವತಿ ನದಿನೀರಿನ ಹರಿವಿನ ಪ್ರಮಾಣದಲ್ಲಿನ ವ್ಯತ್ಯಯದಿಂದ ಆಗಬಹುದಾದ ಪರಿಣಾಮಗಳ ಕುರಿತ ತಜ್ಞರು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ.ನಂತರ ಅಂದು ನಡೆಯುವ ನಗರಬಸ್ತಿಕೇರಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಈ ವಿಷಯದ ಕುರಿತು ಸ್ಥಳೀಯರು ಚರ್ಚಿಸಿ,ಸೂಕ್ತ ನಿರ್ಣಯ ಸ್ವೀಕರಿಸಲಿದ್ದಾರೆ ಎಂದು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಮಂಜುನಾಥ ನಾಯ್ಕ ತಿಳಿಸಿದ್ದು ಸಮಾಲೋಚನಾ ಸಭೆಯಲ್ಲಿ ಪರಿಸರ ತಜ್ಞರಾದ ಅಖಿಲೇಶ ಚಿಪಳಿ,ಶಂಕರ ಶರ್ಮ, ಶರಾವತಿ ನದಿ- ಕಣಿವೆ ಉಳಿಸಿ ಹೋರಾಟ ಸಮಿತಿಯ ಚಂದ್ರಕಾಂತ ಕೊಚರೇಕರ, ಯೋಗೇಶ ರಾಯ್ಕರ,ಸಾರಾ ಧನು ಹೊಸನಗರ, ವಿನೋದ ನಾಯ್ಕ, ವೃಕ್ಷಲಕ್ಷ ಅಂದೋಲನದ ಅನಂತ ಹೆಗಡೆ ಆಶೀಸರ, ಕೆ.ವೆಂಕಟೇಶ,ಕೇಶವ ನಾಯ್ಕ,ಇನ್ನಿತರ ಪ್ರಮುಖರು ಪಾಲ್ಗೊಳ್ಳಲಿದ್ದು,ನದಿಪಾತ್ರದಲ್ಲಿನ ಪ್ರಮುಖರು,ಸಂಘ ಸಂಸ್ಥೆಗಳ ಪ್ರಮುಖರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆ ನೀಡುವಂತೆ ಅವರು ವಿನಂತಿಸಿದ್ದಾರೆ.