Slide
Slide
Slide
previous arrow
next arrow

ಕದಂಬದಲ್ಲಿ ಕಾಳುಮೆಣಸು ಹಬ್ಬಕ್ಕೆ ಅದ್ದೂರಿ ಚಾಲನೆ

300x250 AD

ಯುವ ಕೃಷಿಕರಿಗೆ ಚೆನ್ನಾಭೈರಾದೇವಿ ಪ್ರಶಸ್ತಿ ಪ್ರದಾನ | ಕಾಫಿ ಹರಾಜು ಕೇಂದ್ರ ಉದ್ಘಾಟನೆ

ಶಿರಸಿ: ರೈತರ ಬೆಳೆಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಪ್ರಾರಂಭವಾದ ಕದಂಬ ಸೌಹಾರ್ದ ಸಂಸ್ಥೆ ಇಂದಿಗೂ ರೈತರ ಹಿಂತಚಿಂತನೆಯನ್ನು ಬಯಸುತ್ತಾ ಮುಂದುರೆಯುತ್ತಿರುವುದು ಶ್ಲಾಘನೀಯ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ನಗರದ ಎಪಿಎಮ್‌ಸಿ ಆವರಣದ ಕದಂಬ ಮಾರ್ಕೆಟಿಂಗ್ ಸೌಹಾರ್ಧ ಸಭಾಭವನದಲ್ಲಿ ನಡೆದ ಕಾಳುಮೆಣಸಿನ ಹಬ್ಬ – 2025 ವನ್ನು ಸಾಂಕೇತಿಕವಾಗಿ ಕಾಳುಮೆಣಸು ಕೊಯ್ಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಅದರಂತೆ ರೈತರಿಗೆ, ರೈತರು ಬೆಳೆದ ಬೆಳೆಗಳಿಗೆ ವಿಶೇಷ ಸ್ಥಾನಮಾನ ನೀಡುತ್ತಾ, ಸಂಸ್ಥೆಯ ಜೊತೆ ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮ ಮಟ್ಟಕ್ಕೇರಿಸುತ್ತಿರುವ ಕದಂಬ ಸಂಸ್ಥೆಯ ಕಾರ್ಯ ಎಲ್ಲರೂ ಮೆಚ್ಚುವಂತದ್ದಾಗಿದೆ. ಇಂತಹ ಸಹಕಾರಿ ಸಂಸ್ಥೆಗಳ ಕಾರ್ಯಕ್ಕೆ ಸರ್ಕಾರದಿಂದಲೂ ಉತ್ತಮ ಸಹಕಾರ ಸಿಕ್ಕಾಗ ಬೆಳೆಗಳಿಗೆ ತಕ್ಕುದಾದ ಬೆಲೆ, ಬೆಳೆಗಳ ಮೌಲ್ಯವರ್ಧನೆ, ರೈತರಿಗೆ ಉತ್ತಮ ಬೆಂಬಲ ಸಿಗುವಂತಾಗುತ್ತದೆ.

ರೈತರು ಪ್ರಕೃತಿಯ ಜೊತೆ ನಂಟು ಬೆಸೆದುಕೊಂಡು ಜೀವನ ಸಾಗಿಸುವವರು. ಯಾವಾಗಲೂ ಕಷ್ಟಗಳನ್ನು ಎದುರಿಸುತ್ತಲೇ ಬೆಳೆಯನ್ನು ಕಾಪಾಡಿಕೊಳ್ಳಬೇಕಾದ ಸ್ಥಿತಿಯಿದೆ. ರೈತನ ಕಷ್ಟ ನಿರಂತರ. ಆದ್ದರಿಂದ ರೈತರು ಒಂದೇ ಮುಖ್ಯ ಬೆಳೆಯನ್ನು ಆಧರಿಸದೇ, ಉಪಬೆಳೆಗಳನ್ನು ಬೆಳೆಯುವತ್ತ ಮನಸ್ಸು ಮಾಡಬೇಕಿದೆ. ಅಡಕೆಯ ಜೊತೆ ಕಾಳುಮೆಣಸು, ಕಾಫಿ, ಬಾಳೆ, ಏಲಕ್ಕಿ ಹೀಗೆ ಹಲವು ಉಪಬೆಳೆಗಳನ್ನು ಬೆಳೆಯಬೇಕು. ಇತ್ತೀಚೆಗೆ ರೈತರು ಪಶುಸಂಗೋಪನೆಯಿಂದ ವಿಮುಖರಾಗಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಹೈನುಗಾರಿಕೆಯಿಂದ ಆರ್ಥಿಕ ಪರಿಸ್ಥಿತಿಯೊಂದಿಗೆ ಮಣ್ಣಿನ ಫಲವತ್ತತೆಯಲ್ಲಿ ಶ್ರೀಮಂತಿಕೆ ಕಾಣಬಹುದು. ಅದರಂತೆ ಉಪಬೆಳೆಗಳ ನಿರ್ಲಕ್ಷ್ಯವೂ ಸಲ್ಲ. ಅವುಗಳೂ ಕೂಡ ರೈತರ ಮುಖ್ಯ ಆಸ್ತಿಯಿದ್ದಂತೆ. ಆದರೆ ಹವಾಮಾನ ವೈಪರೀತ್ಯಗಳಿಂದ ಹಲವು ರೋಗಗಳು ಬೆಳೆಗಳನ್ನು ಬಾಧಿಸುತ್ತಿದೆ. ಕೃಷಿ ವಿಜ್ಞಾನಿಗಳು ಇಂತಹ ರೋಗಗಳಿಗೆ ಕಾರಣ, ಪರಿಹಾರೋಪಾಯಗಳನ್ನು ಶೀಘ್ರವಾಗಿ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದರು.

ಹಲವಾರು ಸಂಶೋಧನೆಗಳು ಸಂಶೋಧನಾ ಕೇಂದ್ರಗಳಲ್ಲಿ ಜರುಗಿದರೂ ಅವುಗಳು ರೈತರಿಗೆ ತಲುಪುವಲ್ಲಿ ವಿಫಲವಾದರೆ ಸಂಶೋಧನೆಗಳು ಅರ್ಥ‌ಕಳೆದುಕೊಳ್ಳುತ್ತವೆ. ಆದ್ದರಿಂದ ಸೂಕ್ತ ಕಾಲಕ್ಕೆ ರೈತರ ತೋಟ ಗದ್ದೆಗಳಲ್ಲಿ ಅವು ಅನುಷ್ಠಾನಗೊಳ್ಳುವಂತಾಗಬೇಕು.
ಕದಂಬ ಸಂಸ್ಥೆಯು ಕಾಫಿ ಬೆಳೆಯ ಟೆಂಡರ್ ವ್ಯವಸ್ಥೆಯನ್ನು ಶಿರಸಿಯಲ್ಲೇ ಪ್ರಾರಂಭಿಸಿದ್ದು, ರೈತರಿಗೆ ಕಾಫಿ ಬೆಳೆಯಲು ಹೊಸ ಹುಮ್ಮಸ್ಸು ನೀಡಿದಂತಾಗಿದೆ. ರೈತರ ಆತ್ಮವಿಶ್ವಾಸ ಕಳೆಯದೇ ಆಶಾಭಾವನೆ ಮೂಡಿಸುವ ಸಂಸ್ಥೆಯ ಇಂತಹ ಕಾರ್ಯಕ್ರಮ ನಿರಂತರವಾಗಿರಲಿ ಎಂದು ಆಶಿಸಿದರು.

ಕಾಳುಮೆಣಸು ತಳಿಗಳ ಪ್ರದರ್ಶನವನ್ನು ಉದ್ಘಾಟಿಸಿದ ಬಾಗಲಕೋಟ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ವಿಷ್ಣುವರ್ಧನ್ ಮಾತನಾಡಿ, ತೆರಕನಳ್ಳಿ ಸಂಶೋಧನಾ ಕೇಂದ್ರವನ್ನು ರಾಷ್ಟ್ರಮಟ್ಟದ ಕೇಂದ್ರವಾಗಿ ಹಾಗೂ ಕೃಷಿ ಟೂರಿಸಂ ಸ್ಥಳವನ್ನಾಗಿಸುವ ಪ್ರಯತ್ನ ನಡೆದಿದೆ. ಕೇಂದ್ರದಲ್ಲಿ ಹವಾಮಾನ ಬದಲಾವಣೆ ಮೀರಿ ವಿವಿಧ ತಳಿಗಳ ಅಭಿವೃದ್ಧಿ, ಸ್ಥಳೀಯ ತಳಿಗಳನ್ನು ಗುರುತಿಸಿ‌ ಅವುಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದರು. ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಕದಂಬ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಸಂಶೋಧನಾ ಜಂಟಿ ನಿರ್ದೇಶಕ ಡಾ. ಜೆ.ಎಸ್‌. ನಾಗರಾಜ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಕಾಫಿ ಬೆಳೆಯಲು ಯೋಗ್ಯವಲ್ಲ ಎಂಬ ಮಾತನ್ನು ಇಲ್ಲಿನ ರೈತರು ಕಾಫಿ ಬೆಳೆದು ಸುಳ್ಳಾಗಿಸಿದ್ದಾರೆ. ಆದರೆ
ಮಾರುಕಟ್ಟೆಯಲ್ಲಿ ಕಾಫಿಗೆ ಬೆಲೆ ಬೇಕೆಂದರೆ ಕಾಫಿಯ ಗುಣಮಟ್ಟಕ್ಕೆ ಆದ್ಯತೆ ನೀಡಲೇಬೇಕಾಗಿದೆ. ಗುಣಮಟ್ಟದ ಪರಿಶೀಲನೆ ಹಲವು ಹಂತಗಳಲ್ಲಿ ನಡೆಯುತ್ತದೆ. ಹೆಚ್ಚು ಗುಣಮಟ್ಟದ ಕಾಫಿಗೆ ಉತ್ತಮ ಬೆಲೆ ಪಡೆಯಬಹುದಾಗಿದೆ ಎಂದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಸತೀಶ್ ಬಿ.ಪಿ. ಮಾತನಾಡಿ, ಕಾಳುಮೆಣಸನ್ನು ಅತಿ ಹೆಚ್ಚು ರಫ್ತು ಮಾಡುವ ದೇಶ ಭಾರತ. ಅದರಲ್ಲಿ ಕರ್ನಾಟಕ, ಕೇರಳದಲ್ಲಿ ಅತಿಹೆಚ್ಚು ಬೆಳೆಯಲಾಗುತ್ತದೆ. ಆದರೆ ಬೆಳೆಗಳಿಗೆ ಕಾಡುವ ಸಮಸ್ಯೆಗಳಿಂದ ರೈತರು ಹೆಚ್ಚಿನ ಆಸಕ್ತಿ‌ ತೋರುತ್ತಿಲ್ಲ. ಸಂಶೋಧನಾ ಕೆಂದ್ರಗಳಲ್ಲಿ ಹೊಸ ತಳಿಗಳ ಪ್ರಯೋಗವಾಗಿ ಅವುಗಳು ರೈತರಿಗೆ ತಲುಪಬೇಕು. ಕಾಳುಮೆಣಸು ಬೆಳೆಯಲು ಇಲಾಖೆಯಿಂದ ಸಹಾಯಧನ, ನರ್ಸರಿ ಪ್ರಾರಂಭಿಸಲು ಸಹಾಯಧನ ಹಾಗೂ ಸಬ್ಸಿಡಿ ಲಭ್ಯವಿದೆ. ರೈತರು ಈ ಎಲ್ಲಾ ಯೋಜನೆಗಳ ಪ್ರಯೋಜನ ಪಡೆದುಕೊಂಡು ಹೆಚ್ಚು ಕೃಷಿಯಲ್ಲಿ ತೊಡಗಿಕೊಳ್ಳಲು ಕರೆ ನೀಡಿದರು.

ಭಾರತೀಯ ಸಂಬಾರು ಬೆಳೆಗಳ ಸಂಶೋಧನಾ ಉಪಕೇಂದ್ರದ ಮುಖ್ಯಸ್ಥ ಡಾ.ಅಂಕೇಗೌಡ ಮಾತನಾಡಿ, ಮುಖ್ಯಬೆಳೆಯ ಜೊತೆ ಉಪಬೆಳೆಗಳಾದ ಏಲಕ್ಕಿ, ಕಾಳುಮೆಣಸು, ಬಾಳೆ ಮುಂತಾದ ಬೆಳೆಯನ್ನು ಬೆಳೆಯಬೇಕು. ಸಾಧ್ಯವಿದ್ದಲ್ಲೆಲ್ಲಾ ಕಾಳುಮೆಣಸು ನೆಟ್ಟು ತಳಿಗಳನ್ನು ಉಳಿಸಬೇಕು. ನೀರಿನ ವ್ಯವಸ್ಥೆಯಿದ್ದರೆ ಸೊಪ್ಪಿನ ಬೆಟ್ಟಗಳಲ್ಲಿಯೂ ಸಹ ಕಾಳುಮೆಣಸನ್ನು ಬೆಳೆಯಬಹುದಾಗಿದೆ ಎಂದರು. ಬೆಂಬಲ ಬೆಲೆಯ ಕೊರತೆಯಿಂದಾಗಿ ರೈತರಲ್ಲಿ ಆಸಕ್ತಿ ಕಡಿಮೆಯಾಗಿದೆ, ಬೆಳೆಯುವ ಪ್ರಮಾಣವೂ ಕಡಿಮೆಯಾಗಿದೆ. ಅದಕ್ಕಾಗಿ ಸರ್ಕಾರವು ರೈತರ ಬೆಳೆಗಳಿಗೆ ಸೂಕ್ತ ಬೆಲೆಯನ್ನು ನಿಗದಿಪಡಿಸಿ ಕೃಷಿಗೆ ಪ್ರೋತ್ಸಾಹಿಸಬೇಕೆಂದರು.

ಡಾ.ಆರ್. ಬಸವರಾಜ್ ಮಾತನಾಡಿ ಉಪಬೆಳೆಗಳ ಉತ್ಪಾದನೆ, ರಕ್ಷಣೆ ಬಗ್ಗೆ ಕೆವಿಕೆಯಲ್ಲಿ ಮಾಹಿತಿ ಪಡೆಯಬಹುದಾಗಿದೆ. ಬೆಳೆಯಲು ಬೇಕಾದ ಎಲ್ಲಾ ತಾಂತ್ರಿಕ ಪ್ರೋತ್ಸಾಹ ನೀಡಲು ಸದಾಸಿದ್ಧರಿದ್ದೇವೆ.
ರೈತರು ಸಾವಯವ‌ ಕೃಷಿಗೆ ಒತ್ತು ನೀಡಿ. ಸಾವಯವ ಗೊಬ್ಬರದ ಬಳಕೆಯಿಂದ ಬೆಳೆಯ ಉತ್ಪಾದನೆ ಹೆಚ್ಚಿಸಿಕೊಳ್ಳುವುದರ ಜೊತೆ ಮಣ್ಣಿನ ಫಲವತ್ತತೆ ಕಾಪಾಡಬೇಕು. ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಎಂದರು.

300x250 AD

ರಾಣಿ ಚೆನ್ನಾಭೈರಾದೇವಿ ಪ್ರಶಸ್ತಿ ಪುರಸ್ಕೃತ ಅನಂತ ಭಟ್ ತೋರಣಸರ ಮಾತನಾಡಿ ಕಾಳುಮೆಣಸು, ಹಿಪ್ಪಲಿ ಬೆಳೆಗಳಿಗೆ ಬರುವ ರೋಗ ಜಾಸ್ತಿಯಾಗಿದೆ. ಅದರ ಬಗ್ಗೆ ವಿಸ್ತಾರ ಅಧ್ಯಯನವಾಗಿ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಂಬ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶಂಭುಲಿಂಗ ಹೆಗಡೆ ಮಾತನಾಡಿ, ಸಂಸ್ಥೆಯಿಂದ ಯುವ ಕೃಷಿಕರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ. ಯುವಕರು ಕೃಷಿಯಿಂದ ವಿಮುಲಕರಾಗದೇ, ಹೊಸ ಹೊಸ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ತೊಡಗಿಕೊಳ್ಳಿ. ನಿಮ್ಮ ಬೆಂಬಲಕ್ಕೆ ಸಂಸ್ಥೆ ಸದಾ ನಿಮ್ಮೊಂದಿಗಿರುತ್ತದೆ. ಕೃಷಿ ಇಲಾಖೆಗಳ ಸಹಾಯ, ಮಾರ್ಗದರ್ಶನ, ಸಹಾಯಧನ ಯೋಜನೆಗಳನ್ನು ಪಡೆದು ಕೃಷಿಯಲ್ಲಿ ಮುಂದುವರೆಯಿರಿ ಎಂದರು.

ಇದೇ ವೇಳೆ ಕಾಳುಮೆಣಸಿನ ಬ್ರಾಂಡ್ ಬಿಡುಗಡೆಗೊಳಿಸಲಾಯಿತು. ರಾಣಿ ಚೆನ್ನಾಭೈರಾದೇವಿಯ ಕುರಿತಾಗಿ ಪರಿಸರ ಅಂಕಣಕಾರ ಶಿವಾನಂದ ಹೆಗಡೆ ಮಾಹಿತಿಯನ್ನು ನೀಡಿದರು. ಪ್ರಾಸ್ತಾವಿಕವಾಗಿ ವಿಶ್ವೇಶ್ವರ ಭಟ್ ಕೋಟೆಮನೆ ಮಾತನಾಡಿದರೆ, ಅತಿಥಿಗಳನ್ನು ನಾರಾಯಣ ಹೆಗಡೆ ಗಡಿಕೈ ಸ್ವಾಗತಿಸಿದರು. ಭಾರ್ಗವಿ ಹೆಗಡೆ ಪ್ರಾರ್ಥಿಸಿದರೆ, ವಂದನೆಗಳನ್ನು ರಾಜೇಂದ್ರ ಜೋಷಿ, ಹಾಗೂ ಕಾರ್ಯಕ್ರಮವನ್ನು ಭಾರ್ಗವ ಹೆಗಡೆ ಶೀಗೆಹಳ್ಳಿ ನಿರ್ವಹಿಸಿದರು.

ರಾಣಿ ಚೆನ್ನಾಭೈರಾದೇವಿ ಪ್ರಶಸ್ತಿ ಪುರಸ್ಕೃತರು:

ಆನಂದ ಗಣಪತಿ ಹೆಗಡೆ ಗುಂಡಿಗದ್ದೆ
ಗಣಪತಿ ಲಕ್ಷ್ಮೀನಾರಾಯಣ ಭಟ್ಟ ಹೊಸ್ತೋಟ
ಆನಂದ ರಾಜಶೇಖರ ಗೌಡ್ರು, ಲಿಂಗನಮಟ್ಟಿ, ಬಾಸಿ, ಬನವಾಸಿ
ವಿನಾಯಕ ನಾಗೇಂದ್ರ ಭಟ್ಟ ತುಡುಗುಣಿ
ಅನಂತ ಮಂಜುನಾಥ ಭಟ್ಟ ತೋರಣಸರ
ರಮೇಶ ಶಾಂತಾರಾಮ ಭಟ್ಟ ಹೆಬ್ಬಾರಕಂಟ

ಕಾಳುಮೆಣಸು ಖಾದ್ಯಗಳ ಸ್ಪರ್ಧೆ:
ಮಹಿಳೆಯರನ್ನು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿ, ಹಾಗೂ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಕಾಳುಮೆಣಸಿದ ಖಾದ್ಯಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಸುಮಾರು 70 ಮಹಿಳೆಯರು ಭಾಗವಹಿಸಿದ್ದು, ವಿಧ ವಿಧವಾದ ಖಾದ್ಯಗಳನ್ನು ತಯಾರಿಸಿದ್ದು ಆಕರ್ಷಣೀಯವಾಗಿತ್ತು.

ಪ್ರಥಮ : ಪದ್ಮಲತಾ ಎಮ್. ಜೈನ್ . ತುಮರಿ ಶಿವಮೊಗ್ಗ –  ಬಾಣಂತಿಯರಿಗೆ ಕೊಡುವ ಮೆಣಸು
ದ್ವಿತೀಯ : ಉಮಾ ಸತೀಶ ಹೆಗಡೆ ಸಂಕದಮನೆ – ಬಾಕರವಾಡಿ 
 ತೃತೀಯ: ಶೋಭಾ ಪಶುಪತಿ ಹೆಗಡೆ ಬೊಪ್ಪನಳ್ಳಿ –  ಕಾಳು ಮೆಣಸಿನ ಉಪ್ಪಿನಕಾಯಿ 
ತೃತೀಯ : ರೇಣುಕಾ ಶ್ರೀಪತಿ ಭಟ್ ಬ್ಯಾಗದ್ದೆ – ಕುರ್‌ಕುರೆ 
ಸಮಾಧಾನಕರ : ಶ್ಯಾಮಲಾ ಮಹೇಶ ಹೆಗಡೆ ಮುಕ್ರಮನೆ –  ಕಾಳು ಮೆಣಸಿನ ಉಪ್ಪಿನಕಾಯಿ 
ಸಮಾಧಾನಕರ : ಸುಮಾ ಆರ್. ಹೆಗಡೆ ಕಡವೆ –  ಕಾಳು ಮೆಣಸಿನ ಜೆಲ್ಲಿ 


ಕಾಳುಮೆಣಸಿನ ಹಬ್ಬದಲ್ಲಿ ಮನಸೆಳೆದ ಕಾಳುಮೆಣಸಿನ ರಂಗೋಲಿ

Share This
300x250 AD
300x250 AD
300x250 AD
Back to top