Slide
Slide
Slide
previous arrow
next arrow

ರಾಷ್ಟ್ರೀಯ ಹೆದ್ದಾರಿ ಪಕ್ಕ ಪ್ರಯಾಣಿಕರಿಗೆ ವಿಶ್ರಮಿಸಲು “ಆಕ್ಸಿಜನ್ ಬಂಕ್” ಲೋಕಾರ್ಪಣೆ

300x250 AD

ಕ್ರಿಯಾಶೀಲ ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕರ ವಿಶಿಷ್ಟ ಕಲ್ಪನೆಯೊಂದಿಗೆ ನಿರ್ಮಾಣ

ಅಕ್ಷಯ ಶೆಟ್ಟಿ ರಾಮನಗುಳಿ
ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಪಕ್ಕ ಅರಣ್ಯ ಇಲಾಖೆಯಿಂದ ಪ್ರವಾಸಿಗರಿಗೆ ವಿಶ್ರಮಿಸಲು ನೂತನವಾಗಿ ನಿರ್ಮಿಸಲಾದ ವಸುಧೆಯ ಹಸಿರೇ ಉಸಿರು ಎಂಬ ಘೋಷವಾಕ್ಯದೊಂದಿಗೆ “ಆಕ್ಸಿಜನ್ ಬಂಕ್” ನ್ನು ಕಾರವಾರ ವಿಭಾಗದ ಅರಣ್ಯ ಉಪಸಂರಕ್ಷಣಾಧಿಕಾರಿ ರವಿಶಂಕರ್ ಉದ್ಘಾಟಿಸಿ ಮಾತನಾಡಿದರು.

ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕಿದೆ‌. ಬೇಸಿಗೆ ಆರಂಭವಾಗುತ್ತಿದ್ದು ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವ ಜಾಗೃತಿ ಜನರಿಂದಲೇ ಆಗಬೇಕಿದೆ. ಆಕ್ಸಿಜನ್ ಬಂಕ್ ಒಂದು ಉತ್ತಮವಾದ ಪರಿಕಲ್ಪನೆ. ಮುಂದಿನ ದಿನಗಳಲ್ಲಿ ಇಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯವನ್ನು ಗ್ರಾಮ ಪಂಚಾಯತಿ, ಗ್ರಾಮ ಅರಣ್ಯ ಸಮಿತಿ, ಅರಣ್ಯ ಇಲಾಖೆಗಳ ಸಹಕಾರದೊಂದಿಗೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು. ಬಳಿಕ ವರ್ಷದ ಕ್ಯಾಲೆಂಡರ್‌ನ್ನು ಬಿಡುಗಡೆಗೊಳಿಸಿ ಖಾದಿ ಕೈಚೀಲವನ್ನು ಜನರಿಗೆ ಸಾಂಕೇತಿಕವಾಗಿ ನೀಡುವ ಮೂಲಕ ಪ್ಲಾಸ್ಟಿಕ್ ಬಳಕೆ ತ್ಯಜಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ವಲಯ ಅರಣ್ಯಾಧಿಕಾರಿಗಳಾದ ಎಸ್.ಆರ್ ನಾಯ್ಕ, ಲೊಕೇಶ ಪಾಠಣಕರ್, ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವಕರ್, ಡೋಂಗ್ರಿ ಗ್ರಾ.ಪಂ ಅಧ್ಯಕ್ಷ ವಿನೋದ ಭಟ್ಟ, ಸುಂಕಸಾಳ ಗ್ರಾ‌.ಪಂ ಅಧ್ಯಕ್ಷೆ ರಮೀಜಾ ಸೈಯದ್ ಮಾತನಾಡಿದರು.

ಏನಿದು ಆಕ್ಸಿಜನ್ ಬಂಕ್?

300x250 AD

ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು ಪ್ರವಾಸಿಗರು ಹೆಚ್ಚೆಚ್ಚು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ‌‌. ಉತ್ತರ ಕರ್ನಾಟಕ ಮಾತ್ರವಲ್ಲದೇ ಬೇರೆ ಜಿಲ್ಲೆಯ, ಬೇರೆ ರಾಜ್ಯಗಳ ಪ್ರವಾಸಿಗರು ಅರಬೈಲ್ ಘಟ್ಟ ಇಳಿದು ಬರುತ್ತಿದ್ದಂತೆ ಮನೆಯಿಂದ ಬುತ್ತಿ ಕಟ್ಟಿ ತಂದ ಊಟ ಮಾಡಲು ಕುಳಿತುಕೊಳ್ಳಲು ಸೂಕ್ತ ಸ್ಥಳವನ್ನು ಹುಡುಕುತ್ತ ಬರುತ್ತಾರೆ. ಕೊನೆಯಲ್ಲಿ ರಸ್ತೆ ಪಕ್ಕ ಕಾರು ನಿಲ್ಲಿಸಿ ಮರದ ನೆರಳಿನಲ್ಲಿ ಕುಳಿತು ಊಟ ಮಾಡಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ಸನ್ನಿವೇಶಗಳು ನಡೆಯುತ್ತಲೇ ಇರುತ್ತವೆ.

ಇವೆಲ್ಲವುಗಳನ್ನು ಗಮನಿಸಿದ ರಾಮನಗುಳಿ ವಲಯದ ಕ್ರಿಯಾಶೀಲ ಅರಣ್ಯಾಧಿಕಾರಿ ಸುರೇಶ ನಾಯ್ಕ ಅವರು ತಮ್ಮ ವಿಶಿಷ್ಟ ಕಲ್ಪನೆಯೊಂದಿಗೆ ಪ್ರವಾಸಿಗರು ವಿಶ್ರಮಿಸಲು, ಊಟ ಮಾಡಲು ಎಲ್ಲೆಂದರಲ್ಲಿ ರಸ್ತೆ ಪಕ್ಕ ಕೂರುವ ಬದಲು ಅವರಿಗೆ ಅನುವು ಮಾಡಿಕೊಡುವ ಸಲುವಾಗಿ ನಿಗಧಿತ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೊಡ್ಲಗದ್ದೆ ಹತ್ತಿರ ಇಲಾಖೆಯ ಫಾರೆಸ್ಟ್ ಕ್ಯಾಂಪ್ ಬಳಿ ಆಕ್ಸಿಜನ್ ಬಂಕ್ ಹೆಸರಿನ ಪಾರ್ಕ್ ವೊಂದನ್ನು ನಿರ್ಮಿಸಿದ್ದಾರೆ.

ಈ ಪಾರ್ಕಿನ ವಿಶೇಷತೆಯೆಂದರೆ ಇಲಾಖೆಯ ಅರಣ್ಯ ವೀಕ್ಷಕರ ಸಹಕಾರದಲ್ಲಿ ಮುರಿದು ಬಿದ್ದ ಮರದ ಬೊಡ್ಡೆಯನ್ನೆ ಆಸನ, ಟೇಬಲ್ ಆಗಿ ಪರಿವರ್ತಿಸಿದ್ದಾರೆ. ಇರುವೆ ಗೂಡು, ಗೆದ್ದಲು ಹುಳುಗಳ ಬಳಿ ಅವುಗಳ ವಿಶೇಷತೆ ಕುರಿತು ನಾಮಫಲಕ ಅಳವಡಿಸಿದ್ದಾರೆ‌. ಪಕ್ಷಿಗಳಿಗೆ ಕುಡಿಯಲು ಮಣ್ಣಿನ ಮಡಿಕೆಯಲ್ಲಿ ನೀರಿಟ್ಟಿದ್ದಾರೆ‌‌. ವಿವಿಧ ಮರಗಳ ಹೆಸರನ್ನು ಗುರುತು ಪಡಿಸಿ ಅವುಗಳ ಉಪಯೋಗದ ಮಾಹಿತಿ ಫಲಕ ಅಳವಡಿಸಿದ್ದಾರೆ. ಗಲ್ಲಿ ಚೆಕ್ಸ್, ಧ್ಯಾನಕ್ಕೆ ಕುಳಿತುಕೊಳ್ಳುವ ಸಾಂಪ್ರದಾಯಿಕ ಕಟ್ಟೆ ಮುಂತಾದವುಗಳನ್ನು ನಿರ್ಮಿಸಿ ಅವುಗಳ ಕುರಿತು ಸೂಕ್ತ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಿದ್ದಾರೆ‌. ಪಾರ್ಕಿನ ಒಳ, ಹೊರಗೆ ಎಲ್ಲೆಡೆ‌ ಕಸದ ತೊಟ್ಟಿಯನ್ನು ನಿರ್ಮಿಸಲಾಗಿದ್ದು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಕಟ್ಟುನಿಟ್ಟಿನ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಂಘ ಸಂಸ್ಥೆಗಳು, ಇಲಾಖೆಗಳ ಸಹಕಾರದೊಂದಿಗೆ ಈ ಪಾರ್ಕ್ ನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಕಾರವಾರ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದ್ದಾರೆ.

ಪ್ರಸ್ತುತ ಇಲಾಖೆ ನಿರ್ಮಿಸಿರುವ ಆಕ್ಸಿಜನ್ ಬಂಕ್ ಎಂಬ ಪ್ರದೇಶವು ಬೀರು ಬೇಸಿಗೆಯಲ್ಲೂ ಸದಾಕಾಲ ತಂಪಾದ ವಾತಾವರಣವನ್ನು ಹೊಂದಿರುತ್ತದೆ. ಪ್ರವಾಸಿಗರಿಗೆ ನೆರಳಲ್ಲಿ ಪ್ರಕೃತಿಯ ಮಡಿಲಿನಲ್ಲಿ ತಂಪಾದ ಶುದ್ಧ ಗಾಳಿಯನ್ನು ಪಡೆದು ತೆರಳುವುದಕ್ಕೆ ಈ ಸ್ಥಳ ಪ್ರಕೃತಿ ಹೇಳಿ ಮಾಡಿಸಿಕೊಟ್ಟ ವರವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅರಣ್ಯ ಇಲಾಖೆ ಮೇಲಾಧಿಕಾರಿಗಳು ಇಲಾಖೆ ಅನುದಾನದಡಿಯಲ್ಲಿ ಈ ಪಾರ್ಕ್ ನ್ನು ಅಭಿವೃದ್ಧಿ ಪಡಿಸಿದರೆ ಇದು ಉತ್ತಮ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.

Share This
300x250 AD
300x250 AD
300x250 AD
Back to top