ಯಲ್ಲಾಪುರ : ರಾಜ್ಯ ಸರಕಾರದ ರೈತ ವಿರೋಧಿ ನೀತಿ ವಿರೋಧಿಸಿ, ಅಡಕೆ ಮತ್ತು ಜೋಳ ಬೆಳೆಗಾರರ ಜೊತೆಗೂಡಿ ಉತ್ತರ ಕನ್ನಡ ಜಿಲ್ಲಾ ರೈತಮೋರ್ಚಾ ನೇತೃತ್ವದಲ್ಲಿ ಬೃಹತ್ ಮೆರಣಿಗೆ ಮತ್ತು ಪ್ರತಿಭಟನೆ ಸಭೆ ಯಲ್ಲಾಪುರ ಪಟ್ಟಣದಲ್ಲಿ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದ, ಬಿಜೆಪಿ ರೈತಮೋರ್ಚಾ ರಾಜ್ಯಪ್ರಧಾನ ಕಾರ್ಯದರ್ಶಿ ಡಾ. ನವೀನಕುಮಾರ್ ಮಾತನಾಡಿ, ರಾಜ್ಯದಲ್ಲಿ ರೈತವಿರೋಧಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ನಿದ್ರಾವಸ್ಥೆಯಲ್ಲಿದೆ. ರಾಜ್ಯದಲ್ಲಿ ರೈತರು ತೀರಾ ಸಂಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸುವಲ್ಲಿ, ಅದಕ್ಕೆ ವೈಜ್ಞಾನಿಕ ಪರಿಹಾರ ನೀಡುವಲ್ಲಿ ರಾಜ್ಯ ಸರಕಾರ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ರೈತರ ಹಿತಕ್ಕಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದರು.
ಬಿಜೆಪಿಯಿಂದ ಆಯ್ಕೆಯಾಗಿ ಈಗ ಕಾಂಗ್ರೆಸ್ ಹಾದಿ ಹಿಡಿದಿರುವ ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ನಡೆಯನ್ನು ತೀವ್ರವಾಗಿ ಖಂಡಿಸಿದ ಅವರು, ಹೆಬ್ಬಾರ್ ಅವರ ಈ ನಡೆ ಶೋಭೆಯಲ್ಲ. ಅವರಿಗೆ ಧೈರ್ಯವಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಯನ್ನು ಎದುರಿಸಲಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಮಾತನಾಡಿ, ಅಡಕೆಗೆ ಕೊಳೆರೋಗ ಸೇರಿದಂತೆ ಇನ್ನಿತರ ರೋಗಗಳು ವ್ಯಾಪಕವಾಗಿ ಹರಡಿದ್ದರೂ ಸಹ, ಅದನ್ನು ಗುರುತಿಸಿ ರಾಜ್ಯ ಸರಕಾರಕ್ಕೆ ವರದಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅದರ ನೇರ ಪರಿಣಾಮ ರೈತರ ಮೇಲಾಗಿದೆ. ಇದರ ಸಂಪೂರ್ಣ ಹೊಣೆಯನ್ನು ಉಸ್ತುವಾರಿ ಮಂತ್ರಿ ಹಾಗು ರಾಜ್ಯ ಸರಕಾರ ವಹಿಸಬೇಕು. ಮತ್ತು ಈ ಕೂಡಲೇ ಬೆಳೆವಿಮೆಯನ್ನು ರೈತರಿಗೆ ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಕಳೆದ ಸಾಕಷ್ಟು ತಿಂಗಳುಗಳಿಂದ ಬಿಜೆಪಿಯ ರೈತಪರ ಹೋರಾಟದಿಂದ ಇಲ್ಲಿಯ ಶಾಸಕರು ಈಗ ಎಚ್ಚರಗೊಂಡು ಹದಿನೈದು ದಿನದಲ್ಲಿ ಬೆಳೆವಿಮೆ ಜಮಾ ಆಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಆಯ್ಕೆಗೊಂಡ ಶಾಸಕರು ಇದೀಗ ಬಿಜೆಪಿ ಕಾರ್ಯಕರಗತರಿಗೆ ಮೋಸ ಮಾಡಿ ಕಾಂಗ್ರೆಸ್ ಪಕ್ಷದ ಬಾಗಿಲಿನಲ್ಲಿ ನಿಂತಿದ್ದಾರೆ. ಶಾಸಕ ಹೆಬ್ಬಾರ್ ಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಯನ್ನು ಎದುರಿಸಲಿ. ನಮ್ಮ ಬಿಜೆಪಿ ಕಾರ್ಯಕರ್ತರ ತಾಕತ್ತನ್ನು ನಾವು ತೋರಿಸುತ್ತೇವೆ. ಜಿಲ್ಲೆಯಲ್ಲಿ ಸಾಕಷ್ಟು ರೋಗಗಳಿಂದ ಅಡಕೆ, ಜೋಳ ಮತ್ತು ಕಬ್ಬಿನ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಈ ಕೂಡಲೇ ರಾಜ್ಯ ಸರಕಾರ ಎಚ್ಚರಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದರು.
ರಾಜ್ಯ ಬಿಜೆಪಿ ಸಹವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕಾಂಗ್ರೆಸ್ ಯಾವತ್ತಿಗೂ ಜನವಿರೋಧಿ ಮತ್ತು ದೇಶವಿರೋಧಿ ಸರಕಾರವಾಗಿದೆ. ಈಗಿನ ಘಟನೆಗಳು ಅದನ್ನು ಪದೇ ಪದೇ ಸಾಬೀತು ಮಾಡುತ್ತಿವೆ. ರೈತರ ಮೇಲೆ ಗಧಾಪ್ರಹಾರ ಮಾಡುವುದನ್ನು ಸರಕಾರ ನಿಲ್ಲಿಸಬೇಕು ಎಂದರು.
ಜಿಲ್ಲಾ ಉಪಾಧ್ಯಕ್ಷ ಎಲ್.ಟಿ.ಪಾಟೀಲ್ ಮಾತನಾಡಿ, ರೈತರ ಬೆಳೆವಿಮೆಯನ್ನು ರಾಜ್ಯಸರಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಇದು ಥರವಲ್ಲ. ಜೊತೆಗೆ ಸ್ಥಳೀಯ ಶಾಸಕರಾದ ಹೆಬ್ಬಾರ್ ಅವರು ಅರ್ಧನಾರೀಶ್ವರ ರೂಪದಲ್ಲಿದ್ದಾರೆ. ಅದರ ಬದಲಾಗಿ ಪೂರ್ಣವಾಗಿ ಕಾಂಗ್ರೆಸ್ ಸೇರ್ಪಡೆಗೊಂಡು ಚುನಾವಣೆಯನ್ನು ಎದುರಿಸಿ ಎಂದು ಶಾಸಕ ಹೆಬ್ಬಾರ್ ಗೆ ಸವಾಲನ್ನು ಎಸೆದರು.
ಕಾರ್ಯಕ್ರಮದಲ್ಲಿ ಬಿಜೆಪಿ ಯಲ್ಲಾಪುರ ತಾಲೂಕು ಅಧ್ಯಕ್ಷ ಪ್ರಸಾದ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹರ್ತೆಬೈಲ್, ಶಿವಾಜಿ ನರಸಾನಿ, ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು, ಬಿಜೆಪಿ ಪ್ರಮುಖರು ಇದ್ದರು. ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಸ್ವಾಗತಿಸಿದರು.
ಯಲ್ಲಾಪುರ ಬಸ್ಟ್ಯಾಂಡ್ ವೃತ್ತದಿಂದ ದೇವಿ ಮೈದಾನದವರೆಗೆ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ದೇವೀ ಮೈದಾನದಲ್ಲಿ ಪ್ರತಿಭಟನೆ ಸಭೆ ನಡೆಸಿ, ನಂತರದಲ್ಲಿ ತಹಶೀಲ್ದಾರ್ ಕಛೇರಿಗೆ ಸಾಗಿ ಮನವಿ ಸಲ್ಲಿಸಲು ತೀರ್ಮಾನಿಸಿದರು. ಆದರೆ ಮನವಿ ಸ್ವೀಕರಿಸಲು ತಹಶೀಲ್ದಾರ್ ಇರದಿದ್ದ ಕಾರಣ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದು, ಚಾಪೆ ಹಾಸಿ ಮಲಗಿದ ಪ್ರಹಸನವೂ ನಡೆಯಿತು. ಅಂತಿಮವಾಗಿ ಸಹಾಯಕ ಆಯುಕ್ತೆ ಕಾವ್ಯಾರಾಣಿ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.
ಖೋಟ್ ::
ಯಲ್ಲಾಪುರ ಶಾಸಕ ಬಿಜೆಪಿಯಿಂದ ಆಯ್ಕೆಯಾಗಿ, ಇದೀಗ ನಮ್ಮ ಬಿಜೆಪಿ ಕಾರ್ಯಕರ್ತರಿಗೇ ಮೋಸ ಮಾಡಿದ್ದಾರೆ. ಅವರಿಗೆ ಧೈರ್ಯವಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ. ನಮ್ಮ ಕಾರ್ಯಕರ್ತರ ಶಕ್ತಿಯನ್ನು ನಾವು ತೋರಿಸುತ್ತೇವೆ. – ರಮೇಶ ನಾಯ್ಕ, ಕುಪ್ಪಳ್ಳಿ, ಜಿಲ್ಲಾಧ್ಯಕ್ಷ,
ಬಿಜೆಪಿ ರೈತಮೋರ್ಚಾ ಉತ್ತರ ಕನ್ನಡ
: ರೈತಮೋರ್ಚಾದ ಪ್ರತಿಭಟನೆಯಲ್ಲಿ ಉಸ್ತುವಾರಿ ಸಚಿವರು ಕಾಣಿಯಾಗಿದ್ದಾರೆ. ತುರ್ತಾಗಿ ಹುಡುಕಿಕೊಡಿ ಎನ್ನುವ ಬರಹಗಳು ಕಂಡಬಂದವು. ಜಿಲ್ಲೆಯಲ್ಲಿ ರೈತರ ಸಮಸ್ಯೆಗಳು ಹಾಸಿ ಹೊದೆಯುವಷ್ಟು ಇದ್ದರೂ ಸಹ, ಉಸ್ತುವಾರಿಗಳು ಮಾತ್ರ ರೈತರ ನೆರವಿಗೆ ಧಾವಿಸುತ್ತಿಲ್ಲ. ಕೇವಲ ಹೆಸರಿಗಷ್ಟೇ ಉಸ್ತುವಾರಿಗಳು ಎನ್ನುವ ಮೂಲಕ ಮೂಲಕ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೆ ಟಾಂಗ್ ನೀಡಿದ್ದಾರೆ.