ರಕ್ತದ ಮಡುವಿನಲ್ಲಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸುವಲ್ಲಿ ಯಶಸ್ವಿ
ಅಕ್ಷಯ ಶೆಟ್ಟಿ ರಾಮನಗುಳಿ
ಯಲ್ಲಾಪುರ: ಗುಳ್ಳಾಪುರದಲ್ಲಿ ನಸುಕಿನ ಜಾವ ನಡೆದ ಅಪಘಾತದಲ್ಲಿ 10 ಜನ ದಾರುಣ ಸಾವನಪ್ಪಿದ ಘಟನೆ ಮಾಸುವ ಮುನ್ನವೇ ಗುರುವಾರ ಬೆಳಿಗ್ಗೆ ಅರಬೈಲ್ ಘಟ್ಟದಲ್ಲಿ ಕಾರೊಂದು ಭೀಕರ ಅಪಘಾತಕ್ಕೀಡಾದ ಘಟನೆ ಜರುಗಿದೆ. ಕಾರಿನಲ್ಲಿದ್ದ ಒಂದು ವರ್ಷದ ಬಾಲಕಿಯನ್ನು ರಕ್ಷಿಸುವಲ್ಲಿ ಗುಳ್ಳಾಪುರದ ಸಾಮಾಜಿಕ ಕಾರ್ಯಕರ್ತ ಆನಂದ ನಾಯ್ಕ ಮುಂದಾಗಿರುವುದು ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತಗೊಂಡಿವೆ.
ಘಟನೆಯ ವಿವರ:
ಪ್ರಸ್ತುತ ಅರಬೈಲ್ ಘಟ್ಟದಲ್ಲಿ ಹೆದ್ದಾರಿಗೆ ಡಾಂಬರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ಒಂದು ಬದಿಯ ವಾಹನಗಳನ್ನು ಸ್ಥಗಿತಗೊಳಿಸಿ, ಇನ್ನೊಂದು ಬದಿಯಿಂದ ವಾಹನಗಳನ್ನು ಬಿಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಯಲ್ಲಾಪುರ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಗೂಡ್ಸ್ ತುಂಬಿದ ಲಾರಿ ಹಾಗೂ ಟ್ಯಾಂಕರ್ ನ ನಡುವೆ ಸಿಲುಕಿಕೊಂಡು ನುಜ್ಜುಗುಜ್ಜಾಗಿತ್ತು. ಈ ಘಟನೆಯನ್ನು ಯಲ್ಲಾಪುರಕ್ಕೆ ತೆರಳುತ್ತಿದ್ದ ಗುಳ್ಳಾಪುರದ ಸಾಮಾಜಿಕ ಕಾರ್ಯಕರ್ತ ಆನಂದು ನಾಯ್ಕ ಪ್ರತ್ಯಕ್ಷದರ್ಶಿಯಾಗಿ ಘಟನೆಯನ್ನು ಮಾಧ್ಯಮ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ.
ಕಾರು ಅಪಘಾತವನ್ನು ಗಮನಿಸಿದ ಆನಂದು ನಾಯ್ಕ ಹಾಗೂ ಅವರ ಮಗ ಅಶ್ವತ್ಥ ನಾಯ್ಕ ಕೂಡಲೇ ಕಾರಿನಲ್ಲಿದ್ದವರ ರಕ್ಷಣೆಗೆ ಧಾವಿಸಿದರು. ಕಾರಿನೊಳಗಿದ್ದ ಒಂದು ವರ್ಷದ ಪುಟ್ಟ ಮಗು ಶಶಿಕಾ ಎಂಬಾಕೆ ಪ್ರಜ್ಞೆ ತಪ್ಪಿ ಸಿಲುಕಿರುವುದನ್ನು ಗಮನಿಸಿದ ಆನಂದು ನಾಯ್ಕ, ತಕ್ಷಣ ಕಾರಿನ ಬಿಡಿಭಾಗಗಳನ್ನು ಒಡೆದು ಮಗುವನ್ನು ಹೊರತೆಗೆಯುತ್ತಾರೆ. ಆಕೆಯು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಾರಣ ಆತಂಕಗೊಂಡ ಇವರು ಆಕೆಗೆ ಕೆಲಕಾಲ ಪ್ರಥಮ ಚಿಕಿತ್ಸಾ ವಿಧಾನದಲ್ಲಿ ಪ್ರಜ್ಞೆ ಬರುವ ಹಾಗೇ ಪ್ರಯತ್ನಿಸುತ್ತಾರೆ. ಬಳಿಕ ನಿಧಾನವಾಗಿ ಕಣ್ತೆರದ ಬಾಲಕಿ ಅಳಲು ಪ್ರಾರಂಭಿಸಿದಾಗ, ತನ್ನ ಕಾರು ಟ್ರಾಫಿಕ್ ನಲ್ಲಿ ಸಿಲುಕಿರುವ ಕಾರಣ ರಕ್ತಸಿಕ್ತವಾದ ಆಕೆಯನ್ನು ತನ್ನ ಹೆಗಲ ಮೇಲೇರಿಸಿ ಓಡೋಡಿ ಬಂದು ತಕ್ಷಣಕ್ಕೆ ಸಿಕ್ಕ ಕಾರಿನೊಂದಿಗೆ ಯಲ್ಲಾಪುರ ತಾಲೂಕಾಸ್ಪತ್ರೆಗೆ ಖುದ್ದಾಗಿ ತೆರಳುವ ಮೂಲಕ ಶಶಿಕಾ ಎಂಬ ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನಂದು ನಾಯ್ಕ ಅವರ ಸಮಯ ಪ್ರಜ್ಞೆ ಹಾಗೂ ತಕ್ಷಣಕ್ಕೆ ಸ್ಪಂದಿಸಿದ ರೀತಿ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತಗೊಂಡಿವೆ. ಶಾಸಕ ಶಿವರಾಮ ಹೆಬ್ಬಾರ್ ಅವರು ಆನಂದು ನಾಯ್ಕ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.