ಗ್ರೀನ್‌ಕೇರ್ ಸಂಸ್ಥೆಯ ಉಚಿತ ಆರಿ ಎಂಬ್ರಾಯ್ಡರಿ ತರಬೇತಿಗೆ ಚಾಲನೆ
ಶಿರಸಿ: ಆಧುನಿಕ ಜೀವನ ಶೈಲಿಗೆ ಪೂರಕವಾದ ವಿನ್ಯಾಸ ಕ್ಷೇತ್ರವು ದೊಡ್ಡ ಉದ್ಯಮವಾಗಿ ಬೆಳೆದಿರುವುದರಿಂದ ಮಹಿಳೆಯರಿಗೆ ಉದ್ಯೋಗವಕಾಶವನ್ನು ಸೃಷ್ಟಿಸುತ್ತಿದೆ. ಈ ನಿಟ್ಟಿನಲ್ಲಿ ಆರಿ ಎಂಬ್ರಾಯ್ಡರಿ ಕ್ಷೇತ್ರವು ಒಂದಾಗಿದ್ದು ಈ ಕೌಶಲ್ಯ ಕಲಿತ ಮಹಿಳೆಯರು, ಸ್ವ ಉದ್ಯೋಗ ಹೊಂದಿ ಆರ್ಥಿಕ ಸ್ವಾತ್ಯಂತ್ರದ ಜೊತೆಗೆ ನೆಮ್ಮದಿಯ ಹಾಗೂ ಉತ್ಸಾಹಪೂರ್ಣ ಜೀವನ ನಡೆಸುವಂತಾಗಬೇಕು ಎಂದು ಶಿರಸಿ ಉಪವಿಭಾಗಾಧಿಕಾರಿ ಕು. ಕಾವ್ಯರಾಣಿ ಕೆ.ವಿ ಹೇಳಿದರು.
ಅವರು ಇಲ್ಲಿನ ಗ್ರೀನ್‌ಕೇರ್ ಸಂಸ್ಥೆಯು ಕೀರ್ತಿ ಫ್ಯಾಷನ್ಸ್ ಸಹಯೋದಲ್ಲಿ ಕೌಶಲ್ಯ ವಿಕಾಸ ಯೋಜನೆಯಡಿ ಆಯೋಜಿಸಿರುವ ಆರಿ ಎಂಬ್ರಾಯ್ಡರಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರೀನ್‌ಕೇರ್ ಸಂಸ್ಥೆಯು ಇಂದಿನ ಕಾಲಮಾನಕ್ಕೆ ತಕ್ಕಂತೆ ಅಗತ್ಯವಿರುವ ಇಂತಹ ತರಬೇತಿಯನ್ನು ಉಚಿತವಾಗಿ ನೀಡುತ್ತಾ ಇರುವುದು ಅತ್ಯಂತ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಸುಮನ ಹೆಗಡೆ, ಅಧ್ಯಕ್ಷರು, ರೋಟರಿ ಕ್ಲಬ್ ಶಿರಸಿ ಮಾತನಾಡಿ ಗ್ರೀನ್‌ಕೇರ್ ಸಂಸ್ಥೆಯು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಮುಖಿ ಕಾರ್ಯ ಮಾಡುತ್ತಿರುವ ಸಂಸ್ಥೆಗಳಲ್ಲಿ ಒಂದಾಗಿದ್ದು ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳಂತ ಕಾರ್ಯಗಳ ಜೊತೆಯಲ್ಲಿ ಕೌಶಲ್ಯ ತರಬೇತಿ ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯು ಇನ್ನೂ ಹೆಚ್ಚು ವಿಸ್ತಾರವಾಗಿ ಬೆಳೆಯಲಿ ಎಂದರು.
ಸುಯೋಗ ಆಶ್ರಮದ ಮುಖ್ಯಸ್ಥರಾದ ಲತಿಕಾ ಭಟ್ ಮಾತನಾಡಿ ವಯೋವೃದ್ದರಿಗೆ ನಿರಂತರವಾಗಿ ಆರೋಗ್ಯ ತಪಾಸಣೆ ಹಾಗೂ ಔಷಧಗಳನ್ನು ನೀಡಿ ಆರೈಕೆಯಲ್ಲಿ ಸಹಕಾರ ನೀಡುತ್ತಿರುವ ಗ್ರೀನ್‌ಕೇರ್ ಸಂಸ್ಥೆಯ ನಿಸ್ವಾರ್ಥ ಸೇವೆಯನ್ನು ಎಲ್ಲರೂ ಮೆಚ್ಚುವಂಥದ್ದು, ಉಚಿತ ಕೌಶಲ್ಯ ತರಬೇತಿ ನೀಡಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಇವರ ಪ್ರಯತ್ನ ಯಶಸ್ವಿಯಾಗಲಿ ಎಂದರು.
ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ್ ಅವರು ಮಾತನಾಡಿ ಸಮಾಜದ ಅಭ್ಯುದಯಕ್ಕೆ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆ ಹಾಗೂ ಅದರ ನಿರ್ದೇಶಕರು ನಿಜವಾಗಿರು ಅಭಿನಂದನಾರ್ಹರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಉದ್ಯಮಿಗಳು ಹಾಗೂ ಸಂಸ್ಥೆಯ ಹಿರಿಯ ಸಲಹೆಗಾರರಾದ ಅಶೋಕ ಮುಳೆ ಅವರು ಮಾತನಾಡಿ ಕಲಿಯುವ ವಿದ್ಯೆಯನ್ನು ಬಳಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಕೀರ್ತಿ ರಾಯ್ಕರ್ ತರಬೇತಿ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಸ್ಮಿತೆ ಫೌಂಡೇಶನ್ ನ ಡಾ. ರಿಯಾಜ್ ಸಾಗರ್ ಮತ್ತು ಸಂಕಲ್ಪ ಟ್ರಸ್ಟ್ ನ ಶ್ರೀ ಕುಮಾರ್ ಪಟಗಾರ ಉಪಸ್ಥಿತರಿದ್ದರು. ಗ್ರೀನ್ ಕೇರ್ ಸಂಸ್ಥೆಯ ಉಪಾಧ್ಯಕ್ಷ ಪ್ರಶಾಂತ ಮುಳೆ, ನಿರ್ದೇಶಕರಾದ ಉದಯ ನಾಯ್ಕ, ಸದಸ್ಯರಾದ ಉದಯ ಜಯಪ್ಪನವರ್, ಪ್ರಭುದೇವ ಮತ್ತು ಶ್ರೀಮತಿ ರಜನಿ ದೈವಜ್ಞ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ತರಬೇತಿಯ ಕಿಟ್ಟುಗಳನ್ನು ವಿತರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ ಕುಮಾರ ಆರ್. ಎಂ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು, ರೋಹಿಣಿ ಸೈಲ್ ನಿರೂಪಿಸಿ ಅಪ್ಸಾನ ವಂದಿಸಿದರು.