ಹೊನ್ನಾವರ : ಪುಷ್ಪಾಂಜಲಿ ನಾಟ್ಯ ಕೇಂದ್ರ ಹೊನ್ನಾವರ ಇದರ ಆಶ್ರಯದಲ್ಲಿ ನೃತ್ಯೋತ್ಸವ ಕಾರ್ಯಕ್ರಮ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ಭಾನುವಾರ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯೂ ಎಜುಕೇಶನ್ ಸೊಸೈಟಿ ಅಧ್ಯಕ್ಷ ರಘುನಾಥ ಪೈ ಮಾತನಾಡಿ ಪುಷ್ಪಾಂಜಲಿ ನಾಟ್ಯ ಕೇಂದ್ರವು ಎಲೆಮರೆಯ ಕಾಯಿಯಂತಿರುವ ಹಲವಾರು ಪ್ರತಿಭೆಗಳನ್ನು ಗುರುತಿಸಿ ಭರತನಾಟ್ಯವನ್ನು ಕಲಿಸುತ್ತಿದೆ. ಇಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಅಂಕಣಕಾರ ನಾರಾಯಣ ಯಾಜಿ ಸಾಲೇಬೈಲ ಮಾತನಾಡಿ, ಭರತನಾಟ್ಯವು ಎಲ್ಲ ಕಲೆಗಳಿಗೆ ಪ್ರೇರಣೆಯಾಗಿದೆ. ಮನಸ್ಸಿನ ಒತ್ತಡವನ್ನು ನಿವಾರಿಸಲು ಭರತನಾಟ್ಯದಂತಹ ಕಲೆ ಸಹಕಾರಿ. ಪ್ರಮಿಳಾ ಅವರು ಮಕ್ಕಳಿಗೆ ಭರತನಾಟ್ಯ ಕಲಿಸುವ ಮೂಲಕ ಆನಂದವನ್ನು ಕಾಣುತ್ತಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸತೀಶ ತಾಂಡೇಲ ಮಾತನಾಡಿ, ಕಥಾನಕ ಮತ್ತು ಭಕ್ತಿಯನ್ನೊಳಗೊಂಡ ಭರತನಾಟ್ಯವು ಪ್ರೇಕ್ಷಕರನ್ನು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗವಾಗಿ ಉಳಿದಿದೆ. ಈ ಕಲೆಯನ್ನು ಪ್ರಮಿಳಾ ಮತ್ತು ಎಲ್.ಜಿ.ಭಟ್ ದಂಪತಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ಭರತನಾಟ್ಯ ಕಲಿಕೆಯು ವಿದ್ಯಾರ್ಥಿಗಳ ಇನ್ನಿತರ ವಿದ್ಯೆಗೆ ಪೂರಕವಾಗಿದೆ. ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಇಂತಹ ಕಲೆಯ ಅವಶ್ಯಕತೆ ಇದೆ. ವಿದುಷಿ ಪ್ರಮಿಳಾ ಅವರು ವಿದ್ಯಾರ್ಥಿಗಳಿಗೆ ಕಲೆಯನ್ನು ಧಾರೆಯೆರೆಯುತ್ತಿದ್ದಾರೆ. ಅವರ ಕಲಾ ಸೇವೆ ಮುಂದುವರಿಯಲಿ ಎಂದರು.
ಫಾ. ಅಶೋಕ ಜೋಸೆಫ್ ಉಪಸ್ಥಿತರಿದ್ದರು. ಸಂಘಟಕ ಎಲ್.ಜಿ.ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸುನೀಲ್ ಶೇಟ್ ವಂದಿಸಿದರು. ವಿದುಷಿ ಪ್ರಮಿಳಾ ಕೆ.ಎಸ್. ನೃತ್ಯ ಸಂಯೋಜನೆ ಮತ್ತು ನಿರ್ದೇಶನದಲ್ಲಿ ಪುಷ್ಪಾಂಜಲಿ ನಾಟ್ಯಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ವಿದುಷಿ ಪ್ರಮಿಳಾ ಕೆ.ಎಸ್. ಅವರಿಂದ ಭರತನಾಟ್ಯ ಪ್ರದರ್ಶನ ಜನಮನ ಸೆಳೆಯಿತು.