ದಾಂಡೇಲಿ: ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಮಂಡ್ಯ ಜಿಲ್ಲಾ ಮಾಜಿ ಕಸಾಪ ಅಧ್ಯಕ್ಷ ಜಯಪ್ರಕಾಶ ಗೌಡ ಅವರ ಹೇಳಿಕೆಯನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಖಂಡಿಸಿದೆ.
ಮಂಡ್ಯದ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿರುವ ಬಗ್ಗೆ ಇಡೀ ನಾಡೇ ಮೆಚ್ಚುಗೆಯ ಮಾತುಗಳನ್ನಾಡುತ್ತಿದೆ. ಆದರೆ ಹಿಂದಿನಿಂದಲೂ ಕಸಾಪ ಹಾಗೂ ಸಮ್ಮೇಳನದ ಬಗ್ಗೆ ಪೂರ್ವಾಗ್ರಹ ಇಟ್ಟುಕೊಂಡಿದ್ದ ಜಯಪ್ರಕಾಶ ಗೌಡರವರು ಇಲ್ಲಸಲ್ಲದ ಆರೋಪ ಮಾಡಿ ತಮ್ಮ ಜಿಲ್ಲೆಯಲ್ಲಾದ ಸಾಹಿತ್ಯ ಸಮ್ಮೇಳನದ ಬಗ್ಗೆಯೇ ಅವಹೇಳನಕಾರಿಯಾದ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಅಭೂತಪೂರ್ವವಾಗಿ ಯಶಸ್ಸು ಕಂಡ ಹಾವೇರಿಯಲ್ಲಿ ನಡೆದಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನಿಯವಾಗಿದೆ. ತಮ್ಮ ಸ್ವಂತ ಜಿಲ್ಲೆಯ ಸಮ್ಮೇಳನ ಯಶಸ್ವಿಯಾಗಿದ್ದನ್ನು ಸಹಿಸಿಕೊಳ್ಳದ ಮನಸ್ಥಿತಿಯ ಇವರು ಈ ಹಿಂದೆ ಕಸಾಪ ಜಿಲ್ಲಾ ಅಧ್ಯಕ್ಷರಾಗಿದ್ದನ್ನು ಮರೆತಂತೆ ಕಾಣುತ್ತದೆ. ಸಮ್ಮೇಳನ ಸಂಘಟನೆಯ ಕಷ್ಟ ಎಷ್ಟು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೆ ಜಯಪ್ರಕಾಶ ಗೌಡರು ಈ ರೀತಿ ಮಾತನಾಡುತ್ತಿರಲಿಲ್ಲ. ಅವಹೇಳನಕಾರಿ ಮಾತುಗಳನ್ನಾಡಿದ ಜಯಪ್ರಕಾಶ ಗೌಡರವರು ಕ್ಷಮೆಯಾಚಿಸಬೇಕು ಎಂದು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ, ಗೌರವ ಕಾರ್ಯದರ್ಶಿಗಳಾದ ಪಿ.ಆರ್.ನಾಯ್ಕ, ಜಾರ್ಜ್ ಫರ್ನಾಂಡೀಸ್, ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ ಒತ್ತಾಯಿಸಿದ್ದಾರೆ.