ಯಲ್ಲಾಪುರ: ಯಲ್ಲಾಪುರದ ಅಡಿಕೆ ಭವನದಲ್ಲಿ ಗ್ರೀನ್ ಕೇರ್ ಸಂಸ್ಥೆ ಶಿರಸಿ ಮತ್ತು ಕ್ರಿಯೇಟಿವ್ ತರಬೇತಿ ಕೇಂದ್ರ ಯಲ್ಲಾಪುರ ಇವರ ಸಹಯೋಗದಲ್ಲಿ ‘ಕೌಶಲ್ಯ ವಿಕಾಸ’ ಯೋಜನೆಯಡಿ ಬ್ಯೂಟಿಷಿಯನ್ ಮತ್ತು ಬೇಸಿಕ್ ಫ್ಯಾಶನ್ ಡಿಸೈನಿಂಗ್ ತರಬೇತಿಯ 3ನೇ ಬ್ಯಾಚಿನವರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಸಿಯ ಪ್ರತಿಷ್ಠಿತ ಮನುವಿಕಾಸ ಸಂಸ್ಥೆಯ ನಿರ್ದೇಶಕರಾದ ಗಣಪತಿ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಗ್ರೀನ್ ಕೇರ್ ಸಂಸ್ಥೆಯು ಅವಶ್ಯಕತೆಗೆ ಅನುಗುಣವಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ, ನಿರ್ದಿಷ್ಟ ಗುರಿ ಮತ್ತು ಉದ್ದೇಶವನ್ನು ಹೊಂದಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗ್ರೀನ್ ಕೇರ್ ಸಂಸ್ಥೆಗೆ ಮನುವಿಕಾಸ ಸಂಸ್ಥೆಯು ಅಗತ್ಯ ಸಹಕಾರ ನೀಡಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿಗಳು ಮತ್ತು ಗ್ರೀನ್ ಕೇರ್ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಸದಾಶಿವ ಶಿವಯ್ಯನಮಠ ವಹಿಸಿ ಮಾತನಾಡಿ ನಮ್ಮ ಬದುಕಿನ ಶಿಲ್ಪಿ ನಾವೇ ಎಂಬ ಸ್ವಾಮಿ ವಿವೇಕಾನಂದರ ವಾಣಿಯನ್ನು ನಾವು ಸದಾ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿ ಸಾಧಿಸಲು ಮುಂದಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಅಧ್ಯಕ್ಷರು, ಲ್ಯಾಂಪ್ಸ್ ಸಹಕಾರ ಸಂಘ ಯಲ್ಲಾಪುರ ಮತ್ತು ನಿರ್ದೇಶಕರು ಕರ್ನಾಟಕ ರಾಜ್ಯ ಲ್ಯಾಂಡ್ ಸಹಕಾರ ಮಹಾಮಂಡಲ ನಿಯಮಿತ ಮೈಸೂರು ರಾಮನಾಥ ಸುಬ್ಬ ಸಿದ್ದಿ ಅವರು ಮಾತನಾಡಿ ಸಮಾಜದ ಕೊನೆಯ ವ್ಯಕ್ತಿಗೂ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಬೆರಳೆಣಿಕೆಯಷ್ಟು ಸಂಘ ಸಂಸ್ಥೆಗಳು ಮಾತ್ರ ಮಾಡುತ್ತಿದ್ದು ಅದರಲ್ಲಿ ಗ್ರೀನ್ ಕೇರ್ ಹಾಗೂ ಮನುವಿಕಾಸ ಸಂಸ್ಥೆಯ ಕಾರ್ಯಕ್ರಮಗಳು ಅತ್ಯಂತ ಶ್ಲಾಘನೀಯವಾದದ್ದು ಎಂದರು. ಪಟ್ಟಣ ಪಂಚಾಯತ್ ಯಲ್ಲಾಪುರದ ಸಮುದಾಯ ಸಂಘಟನಾಧಿಕಾರಿಗಳಾದ ಶ್ರೀಮತಿ ಹೇಮಾವತಿ ಭಟ್ ಮಾತನಾಡಿ ಕೌಶಲ್ಯ ವಿಕಾಸ ತರಬೇತಿ ಹೊಂದಿದವರಿಗೆ ಸರಕಾರದ ಯೋಜನೆಗಳ ಬಗ್ಗೆ ತಿಳಿಸಿದರು. ಸಾಮಾಜಿಕ ಕಾರ್ಯಕರ್ತರು ಹಾಗೂ ಖ್ಯಾತ ಉದ್ಯಮಿಗಳಾದ ಶಿರಸಿಯ ಗೃಹ ವೈಭವದ ಪ್ರತಾಪ್ ಮುಳೆ, ಅಸ್ಮಿತೆ ಫೌಂಡೇಶನ್ ಶಿರಸಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಿಯಾಜ್ ಸಾಗರ್ ಸಂದರ್ಭೋಚಿತವಾಗಿ ಮಾತನಾಡಿದರು. ಕ್ರಿಯೇಟಿವ್ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀನಿವಾಸ ಎಂ. ಮುರುಡೇಶ್ವರ ಸ್ವಾಗತಿಸಿದರು , ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್ ಆರ್. ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಗ್ರೀನ್ ಕೇರ್ ಸಂಸ್ಥೆ ಬೆಳೆದು ಬಂದ ದಾರಿ ಮತ್ತು ಕೌಶಲ್ಯ ವಿಕಾಸ ಯೋಜನೆಯ ಬಗ್ಗೆ ತಿಳಿಸಿದರು. ತರಬೇತಿ ಹೊಂದಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಆಶಾ ಡಿಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು. ಗ್ರೀನ್ ಕೇರ್ ಸಂಸ್ಥೆಯ ಅಪ್ಸನಾ ವಂದನಾರ್ಪಣೆಯನ್ನು ಮಾಡಿದರು.