ಹೊನ್ನಾವರ: ತಾಲೂಕಿನ ಮಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್.ಘಟಕದ ವತಿಯಿಂದ ಗುಂಡಿಬೈಲ್ ನಂ.೨ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಗ್ರಾಮೀಣ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಚಿಕ್ಕನಕೋಡ ಗ್ರಾಮೀಣ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜಾಶಂಕರ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಕೊಳ್ಳುವ ಜೊತೆಗೆ ಸಮಾಜಮುಖಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು.
ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಪ್ರಕಾಶ ನಾಯ್ಕ, ಯುವಕರು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಪಾಲಕರನ್ನು ಅವರ ವೃದ್ಧಾಪ್ಯದಲ್ಲಿ ಪ್ರೀತಿಯಿಂದ ಆರೈಕೆ ಮಾಡಬೇಕು ಎಂದು ಸಲಹೆ ನೀಡಿದರು.
ಎಸ್.ಡಿ.ಎಂ.ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಎಂ.ಜಿ.ಹೆಗಡೆ ಮಾತನಾಡಿ, ಕರ್ತವ್ಯ ನಿಭಾಯಿಸುವ ಜೊತೆಗೆ ನಮ್ಮ ಊರು,ಜನ ಹಾಗೂ ಪರಿಸರದ ಕುರಿತಂತೆ ಅಗತ್ಯ ಕಾಳಜಿ ವಹಿಸುವುದು ದೇಶಸೇವೆಯ ಭಾಗವಾಗಿದೆ’ ಎಂದು ಹೇಳಿದರು.
ಪ್ರಾಂಶುಪಾಲ ವಸಂತರಾಯ ಗಾಂವಕರ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಗಾಂಧೀಜಿಯವರ ಪರಿಕಲ್ಪನೆಯಾಗಿದ್ದು ವಿದ್ಯಾರ್ಥಿಗಳು ಶ್ರಮಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕೆಂಬ ಆಶಯ ಒಳಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕನಕೋಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ನಾಯ್ಕ,ಗ್ರಾಮ ಪಂಚಾಯಿತಿ ವತಿಯಿಂದ ಶಿಬಿರಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿ ಶಿಬಿರದ ಯಶಸ್ಸಿಗೆ ಶುಭ ಕೋರಿದರು.
ಮುಖ್ಯ ಶಿಕ್ಷಕ ಕೆ.ಪಿ.ವಿನಯ,ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಕಾಂತ ನಾಯ್ಕ ಮಾತನಾಡಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಜಗದೀಶ ನಾಯ್ಕ,ಉಪಾಧ್ಯಕ್ಷೆ ಹೇಮಾ ನಾಯ್ಕ ಭಾಗವಹಿಸಿದ್ದರು.
ರಕ್ಷ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಉಪನ್ಯಾಸಕ ರಾಜೇಶ ನಾಯ್ಕ ಸ್ವಾಗತಿಸಿದರು.ಮುಕ್ತಾ ಪ್ರತಿಜ್ಞಾವಿಧಿ ಬೋಧಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ನಿರೂಪಿಸಿದರು. ಪುನಿತ್ ವಂದಿಸಿದರು.