ದಾಂಡೇಲಿ : ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಯುಗದಲ್ಲಿರುವ ಇಂದು ಸ್ವಉದ್ಯೋಗಕ್ಕೆ ವಿಪುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಈ ಅವಕಾಶವನ್ನು ಯುವ ಜನತೆ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಯಶಸ್ವಿ ಸ್ವತಂತ್ರ ಸ್ವಾವಲಂಬಿಗಳಾಗಿ ರಾಷ್ಟ್ರದ ಆರ್ಥಿಕ ಕ್ಷೇತ್ರದ ಬಲವರ್ಧನೆಗೆ ಕಾರಣೀಕರ್ತರಾಗಬೇಕೆಂದು ದಾಂಡೇಲಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ್ ಚೌವ್ಹಾಣ್ ಹೇಳಿದರು.
ಅವರು ಮಂಗಳವಾರ ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಆಶ್ರಯದಡಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರುದ್ಯೋಗದ ಚಿಂತೆ ಬಿಡಿ ಸ್ವ ಉದ್ಯೋಗಕ್ಕೆ ಆದ್ಯತೆ ಕೊಡಿ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಸ್ವ ಉದ್ಯೋಗ ಮಾಹಿತಿ ಶಿಬಿರಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯು 25,000ಕ್ಕೂ ಅಧಿಕ ಯುವ ಜನತೆಗೆ ಸ್ವಉದ್ಯೋಗದ ತರಬೇತಿಯನ್ನು ನೀಡಿ, ಸ್ವತಂತ್ರ ಸ್ವಾವಲಂಬನೆಯ ಜೀವನ ನಡೆಸಲು ಮಹತ್ವದ ದಾರಿ ಮಾಡಿ ಕೊಟ್ಟಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆಯ ಯೋಜನಾಧಿಕಾರಿ ಬೋಜ ಅವರು ಆರ್ಸೆಟಿ ಸಂಸ್ಥೆಯಲ್ಲಿ ಪಡೆಯುವ ತರಬೇತಿ ಭವಿಷ್ಯದ ಜೀವನದ ಉನ್ನತಿಗೆ ಸಹಕಾರಿಯಾಗಲಿದೆ. ತರಬೇತಿ ಕೊಡುವುದರ ಜೊತೆಗೆ ಪಡೆದ ತರಬೇತಿಯನ್ನು ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿಯೂ ಸಂಸ್ಥೆ ಮಾರ್ಗದರ್ಶನ ನೀಡುತ್ತಿರುವುದು ಅಭಿನಂದನೀಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕೆನರಾ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾದ ಲೋಕೇಶ್ ಜೆ.ಡಿ ಸ್ವಂತ ಉದ್ಯೋಗದಲ್ಲಿ ಸಿಗುವಂತಹ ನೆಮ್ಮದಿ ಉದ್ಯೋಗದಿಂದ ಸಿಗದು. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಸ್ವ ಉದ್ಯೋಗಿಗಳನ್ನು ರೂಪುಗೊಳಿಸುವ ಒಂದು ಮಹತ್ವದ ಸಂಸ್ಥೆಯಾಗಿ ಗಮನ ಸೆಳೆದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತಕುಮಾರ್ ಬಡ್ಡಿ ಅವರು ಸಂಸ್ಥೆಯಲ್ಲಿ ಅತಿ ಅವಶ್ಯವಾಗಿ ಮತ್ತು ಯುವ ಜನತೆಗೆ ಉಪಯುಕ್ತವಾಗುವ ಸ್ವ ಉದ್ಯೋಗ ತರಬೇತಿಗಳನ್ನು ನೀಡಲಾಗುತ್ತಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್ ಅವರು ಸ್ವ ಉದ್ಯೋಗ ಯಾಕೆ, ಹೇಗೆ, ಏನು ಎನ್ನುವುದರ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಪ್ರಮುಖರಾದ ಮಾನಸಿಂಗ್ ರಾಥೋಡ್, ಹಸನ್ ಬಾಷಾ, ರಿಯಾಜ್ ಬೀಡಿಕರ ಮೊದಲಾದವರು ಉಪಸ್ಥಿತರಿದ್ದರು.
ಗಾಯಕ ಮಹಾಂತೇಶ್ ಅಂಧಕಾರ ಅವರು ಪ್ರಾರ್ಥನೆ ಗೀತೆ ಹಾಡಿದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಯೋಜನಾಧಿಕಾರಿ ಮಹಾಬಲೇಶ್ವರ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಸಂಸ್ಥೆಯ ಮೇಲ್ವಿಚಾರಕರಾದ ನಾರಾಯಣ ವಾಡಕರ ವಂದಿಸಿದರು