ಹಳಿಯಾಳ : ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷ ಹಾಗೂ ಪಟ್ಟಣದ ಸರಕಾರಿ ಗಂಡು ಮಕ್ಕಳ ಶಾಲೆಯ ಶಿಕ್ಷಕರಾದ ಸುಲೇಮಾನ ಶೇಖ ಅವರಿಗೆ ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಬೆಂಗಳೂರಿನ ಆಲ್ ಇಂಡಿಯಾ ಉರ್ದು ವೆಲ್ಫೇರ್ ಡೆವಲಪ್ಮೆಂಟ್ ಚಾರಿಟೇಬಲ್ ಟ್ರಸ್ಟ್ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ಸರಕಾರಿ ಗಂಡು ಮಕ್ಕಳ ಉರ್ದು ಶಾಲೆಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಹಳಿಯಾಳದ ಸರಕಾರಿ ಗಂಡು ಮಕ್ಕಳ ಉರ್ದು ಶಾಲೆಯ ಮುಖ್ಯೋಪಾಧ್ಯಾಯಿನಿ ರಹಮಾನಬಾಯಿ ಮತ್ತು ಸರಕಾರಿ ಹೆಣ್ಣು ಮಕ್ಕಳ ಉರ್ದು ಶಾಲೆಯ ಮುಖ್ಯೋಪಾಧ್ಯಾಯಿನಿ ನಗೀನಾ ದಲಾಯತ್ ಅವರ ನೇತೃತ್ವದಲ್ಲಿ ಶಾಲಾ ಶಿಕ್ಷಕ ವೃಂದದ ಪರವಾಗಿ ಸುಲೇಮಾನ ಶೇಖ ಅವರನ್ನು ಸನ್ಮಾನಿಸಲಾಯಿತು.
ರಹಮಾನಬಾಯಿ ಮತ್ತು ನಗೀನಾ ದಲಾಯತ್ ಅವರು ಸುಲೇಮಾನ ಶೇಖ ಅವರ ವ್ಯಕ್ತಿತ್ವ ಪರೋಪಕಾರಿ ಗುಣವಂತಿಕೆ ಮತ್ತು ಕೆಲಸದಲ್ಲಿರುವ ಶ್ರದ್ಧೆಯನ್ನು ಶ್ಲಾಘಿಸಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವಿಷ್ಣು ಮಾತನಾಡಿ ಶಿಕ್ಷಣ ಇಲಾಖೆಯಲ್ಲಿ ಕಳೆದ 27 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಸುಲೇಮಾನ ಶೇಖ ಅವರು ಸಿ.ಆರ್.ಪಿಯಾಗಿ ಹತ್ತು ವರ್ಷಗಳ ಕಾಲ ಅನುಪಮ ಸೇವೆಯನ್ನು ಸಲ್ಲಿಸಿದ್ದರು. 17 ವರ್ಷಗಳಿಂದ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಸಂಘಟನೆ ಸಮನ್ವಯತೆ ಮತ್ತು ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ಬಂದಿರುವುದು ಅಭಿಮಾನ ತಂದಿದೆ ಎಂದರು.
ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದ ಸುಲೇಮಾನ ಶೇಖ ಅವರು ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನ ಮತ್ತು ಸಹೋದ್ಯೋಗಿಗಳ ತುಂಬು ಹೃದಯದ ಸಹಕಾರದಿಂದ ಶಿಕ್ಷಣ ಇಲಾಖೆಯಲ್ಲಿ ಕಳೆದ 27 ವರ್ಷಗಳಿಂದ ಸಂತೃಪ್ತಿಯಿಂದ ಕೆಲಸ ಮಾಡಲು ಸಾಧ್ಯವಾಗಿದೆ. ಈ ರಾಜ್ಯಮಟ್ಟದ ಪ್ರಶಸ್ತಿ ಬರಲು ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನ ಮತ್ತು ಸಹೋದ್ಯೋಗಿಗಳ ಸಹಕಾರವೆ ಪ್ರಮುಖ ಕಾರಣ ಎಂದರು.
ಈ ಸಂದರ್ಭದಲ್ಲಿ ಸರಕಾರಿ ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ಉರ್ದು ಶಾಲೆಯ ಶಿಕ್ಷಕ ವೃಂದದವರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.