ದಾಂಡೇಲಿ : ಸ್ಕೊಡ್ ವೆಸ್ ಸಂಸ್ಥೆ ಶಿರಸಿ ಮತ್ತು ದೇಸಾಯಿ ಫೌಂಡೇಶನ್ ಟ್ರಸ್ಟ್ ಗುಜರಾತ್ ಇವರ ಆಶ್ರಯದಡಿ ನಗರದ ಸೆಂಟ್ ಮೈಕಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಆರೋಗ್ಯ ಮೇಳವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರು ಮಕ್ಕಳಲ್ಲಿ ಆರೋಗ್ಯದ ಬಗ್ಗೆ ವಿಶೇಷ ಜಾಗೃತಿಯನ್ನು ಮೂಡಿಸಲು ಈ ಕಾರ್ಯಕ್ರಮ ಪರಿಣಾಮಕಾರಿಯಾಗಿದೆ. ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟಂತೆ ಮಕ್ಕಳ ಆರೋಗ್ಯದ ಕಡೆಯೂ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ತಾಲೂಕು ದೈಹಿಕ ಪರಿವೀಕ್ಷಕರಾದ ಜ್ಯೋತಿಪ್ರಭಾ ಅವರು ವಿದ್ಯಾರ್ಥಿಗಳು ಪೌಷ್ಟಿಕ ಆಹಾರಗಳನ್ನು ಸೇವಿಸುವ ಹವ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು. ಆರೋಗ್ಯ ಇದ್ದರೆ ಎಲ್ಲವನ್ನು ಸಾಧಿಸಲು ಸಾಧ್ಯ. ಕಲಿಕೆ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಯಶಸ್ಸನ್ನು ಸಾಧಿಸಲು ಸದೃಢ ಆರೋಗ್ಯ ಬಹುಮುಖ್ಯವಾಗಿದೆ ಎಂದರು.
ದೇಸಾಯಿ ಫೌಂಡೇಶನ್ ಇದರ ಅಧಿಕಾರಿ ಡೋನಾ ಅವರು ದೇಶದ ಆರ್ಥಿಕತೆ ಮತ್ತು ಶೈಕ್ಷಣಿಕ ಕ್ಷೇತ್ರ ಸದೃಢಗೊಳ್ಳಲು ಆರೋಗ್ಯವಂತ ಸಮಾಜ ನಿರ್ಮಾಣ ಅತಿ ಅಗತ್ಯ. ವಿದ್ಯಾರ್ಥಿಗಳು ತಮ್ಮ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕೆಂದು ಕರೆ ನೀಡಿದರು.
ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಸೆಲ್ವಿ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಾತನಾಡಿದರು. ನಗರದ ಹಿರಿಯ ವೈದ್ಯರಾದ ಡಾ. ಮುಕುಂದ ಕಾಮತ್ ಸದೃಢ ಆರೋಗ್ಯಕ್ಕೆ ಅವಶ್ಯ ಆರೋಗ್ಯ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ಕೊಡ್ ವೆಸ್ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಹೇಮಲತಾ ಚೌಗುಲೆ ಅವರು ಸ್ಕೊಡ್ ವೆಸ್ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ದೇಸಾಯಿ ಫೌಂಡೇಶನ್ ನ ಸಹಭಾಗಿತ್ವದಲ್ಲಿ ಈ ಮಕ್ಕಳ ಆರೋಗ್ಯ ಮೇಳವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಭವಿಷ್ಯದ ಉನ್ನತಿಗೆ ಸದೃಢ ಆರೋಗ್ಯದಿಂದಿರಬೇಕೆಂದರು.
ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ವಿನಯ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಾಂತ್ವನ ಕೇಂದ್ರದ ಸಮನ್ವಯ ಅಧಿಕಾರಿ ಬಸಂತವ್ವ ಎಫ್. ನಾಯಕ ವಂದಿಸಿದರು. ಉಮೇಶ್ ಮರಾಠಿ ನಿರೂಪಿಸಿದರು.
ಸ್ಕೊಡ್ ವೆಸ್ ಸಂಸ್ಥೆಯ ಸಿಬ್ಬಂದಿಗಳಾದ ಭಾರತಿ ದೀಪಕ್ ನಾಯಕ, ಪೂಜಾ ಪ್ರಕಾಶ್ ಬಾಲೇಶಗೋಳ, ಸುಧಾ ಪಿ. ನಟೇಶ್ ಹಾಗೂ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ಶಿಕ್ಷಕ ವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ನಗರದ ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.