Slide
Slide
Slide
previous arrow
next arrow

‘ಸರ್ಕಾರದ ನಿಯಮದಂತೆ ಯೋಗ್ಯ ಬೆಲೆಗೆ ಮರಳು ಮಾರಾಟವಾಗುತ್ತಿದೆ’

300x250 AD

ಸಾಂಪ್ರದಾಯಿಕ ಮರಳು ಗುತ್ತಿಗೆದಾರರ ಸಂಘದಿಂದ ಸ್ಪಷ್ಟನೆ

ಹೊನ್ನಾವರ : ನಾವೆಲ್ಲರೂ ಸಾಂಪ್ರದಾಯಿಕ ಪದ್ಧತಿಯ ಮೂಲಕ ಮರಳುಗಾರಿಕೆಯನ್ನು ನಡೆಸಿಕೊಂಡು ಬಂದಿದ್ದು, ಮಾಜಿ ಶಾಸಕರು 20,000 ರಿಂದ 25,000 ರೂಪಾಯಿಗಳಿಗೆ ಮರಳು ಮಾರಾಟ ಮಾಡುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಇದನ್ನು ನಮ್ಮ ಸಂಘವು ಅತ್ಯುಘ್ರವಾಗಿ ಖಂಡಿಸುತ್ತಿದ್ದು, ನಾವು ಎಂದೂ ದುಬಾರಿ ಬೆಲೆಗೆ ಮರಳನ್ನು ಮಾರಾಟ ಮಾಡಿಲ್ಲ ಮತ್ತು ಸರಕಾರಕ್ಕೆ ಸೂಕ್ತ ರಾಜಧನ ತುಂಬಿ ಸರಕಾರದ ನೀತಿ ನಿಯಮಾವಳಿಗಳನ್ನು ಪಾಲಿಸುತ್ತ, ಯೋಗ್ಯ ಬೆಲೆಗೆ ಸಾರ್ವಜನಿಕರಿಗೆ ಮರಳು ಸಿಗುವಂತೆ ಇದುವರೆಗೂ ಮಾಡಿಕೊಂಡು ಬಂದಿದ್ದೇವೆ ಎಂದು ತಾಲೂಕಾ ಸಾಂಪ್ರದಾಯಿಕ ಮರಳು ಗುತ್ತಿಗೆದಾರರ ಸಂಘದವರು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ದಿನಾಂಕ 19/5/2022 ರಂದು ಹಸಿರು ನ್ಯಾಯಪೀಠದ ಪ್ರಕರಣದ ಅನ್ವಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಗೆಯನ್ನು ಮೌಖಿಕವಾಗಿ ನಿಲ್ಲಿಸಿದ್ದು, ಈ ಅವಧಿಯಲ್ಲಿ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ಆವ್ಯಾಹತವಾಗಿ ಆರಂಭಗೊಂಡಿದ್ದು, ಬಹುಶಃ ಇದೇ ಅವಧಿಯಲ್ಲಿ ಮಾಜಿ ಶಾಸಕರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದಂತೆ ಭಟ್ಕಳದಲ್ಲಿ ಪರವಾನಿಗೆಯಿಲ್ಲದ ಸಾಲು-ಸಾಲು ಅಕ್ರಮ ಮರಳು ತುಂಬಿದ ಲಾರಿಗಳನ್ನು ನಿಲ್ಲಿಸಿರಬಹುದು, ಹೊರತಾಗಿ ಪರವಾನಿಗೆ ಪಡೆದ ಸಕ್ರಮ ಮರಳಲ್ಲ ಎಂಬುದನ್ನು ಸಂಘವು ಸ್ಪಷ್ಟಪಡಿಸುತ್ತದೆ. ಇದೇ ಅವಧಿಯಲ್ಲಿ ಹೊನ್ನಾವರ ತಾಲೂಕಿನಲ್ಲಿ ಅಕ್ರಮ ಮರಳು ತುಂಬಿದ ವಾಹನಗಳ ಮಿತಿಮೀರಿದ ವೇಗದಿಂದಾಗಿ ಅಪಘಾತಗಳು ಸಂಭವಿಸಿ ಸಾಲು-ಸಾಲು ಸಾವು ನೋವುಗಳು ಸಂಭವಿಸಿವೆ.

ತಾಲೂಕಿನ ತಹಶೀಲ್ದಾರ ಕಛೇರಿಯ ಮುಂಭಾಗದಲ್ಲಿ ರಾತ್ರಿ ಮಲಗಿದ್ದ ಬೀದಿ ಬದಿ ಬಟ್ಟೆ ವ್ಯಾಪಾರಿಗಳ ಮೇಲೆ ಮರಳು ಲಾರಿ ಹರಿದು ಎರಡು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಪಟ್ಟಣದ ಎಮ್ಮೆ- ಪೈಲ್ ಬಳಿ ಇಬ್ಬರು, ಎಲೆಮಾಳ ಮತ್ತು ಕವಲಕ್ಕಿ ಬಳಿ ಇಬ್ಬರು ಹಾಗೂ ಹೊನ್ನಾವರ ಐ.ಟಿ.ಐ. ಕಾಲೇಜಿನ ಬಳಿ ಒಬ್ಬರು, ಚಂದಾವರದ ಹತ್ತಿರದ ಸಂತೇಗುಳಿ ಬಳಿ ಮತ್ತು ಕರಿಕುರ್ವಾದಲ್ಲಿ ಕಾಲೇಜು ವಿದ್ಯಾರ್ಥಿಯ ಮೇಲೆ ಲಾರಿ ಹರಿದು ಸಾವನ್ನಪ್ಪಿದ ಉದಾಹರಣೆಗಳಿರುತ್ತದೆ. ಒಟ್ಟಾರೆಯಾಗಿ ಅಕ್ರಮ ಮರಳು ತುಂಬಿದ ವಾಹನಗಳಿಂದ ಸಾವು-ನೋವು ಸಂಭವಿಸಿದ್ದು ಇರುತ್ತದೆ. ಇದೇ ಅವಧಿಯಲ್ಲಿ ವಿವಿಧ ರೀತಿಯ ಕ್ರಿಮಿನಲ್ ಪ್ರಕರಣಗಳು ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು, ಇದೇ ಅವಧಿಯಲ್ಲಿಯೇ ಅಕ್ರಮ ಮರಳುಗಾರಿಕೆಯಿಂದಾಗಿ ಸಾರ್ವಜನಿಕರು ಭಯದಲ್ಲೇ ಜೀವನ ದೂಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

300x250 AD

ತದನಂತರದಲ್ಲಿ ಅಂತಹ ಅಕ್ರಮಗಳಿಂದ ಸಾವು ನೋವುಗಳು ಸಂಭವಿಸುವುದೆಲ್ಲವನ್ನೂ ಮನಗಂಡು ಮತ್ತು ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಆಕ್ರಮ ಮರಳು ವಾರಾಟವಾಗುವುದು ನೋಡಿ ಬಡಜನರಿಗೆ ಅತ್ಯಂತ ಕಡಿಮೆ ಬೆಲೆಗೆ ಮೊದಲಿನಂತೆ ಪರವಾನಿಗೆ ಇರುವ ಮರಳು ಸಿಗಬೇಕೆಂದು ದಿನಾಂಕ 15-3- 2024 ರಂದು ಈಗಿನ ಸರಕಾರ ಮತ್ತು ಜಿಲ್ಲಾಡಳಿತವು ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ನೀಡಿದ್ದು, ದಿನಾಂಕ 15-6-2024ರವರೆಗೆ ಚಾಲನೆಯಲ್ಲಿತ್ತು.

ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಅತ್ಯಂತ ಕಡಿಮೆ ಬೆಲೆಗೆ ಗುಣಮಟ್ಟದ ಯೋಗ್ಯ, ಪರವಾನಿಗೆ ಹೊಂದಿದ ಮರಳು ಸಿಕ್ಕಿದ್ದು, ಸಾರ್ವಜನಿಕರಿಗೆ, ವಿವಿಧ ಬಡ ಫಲಾನುಭವಿಗಳಿಗೆ ಮತ್ತು ಸರಕಾರದ ವಿವಿಧ ಕಾಮಗಾರಿಗಳಿಗೆ ಇದರಿಂದ ಅತ್ಯಂತ ಅನುಕೂಲವಾಗಿರುತ್ತದೆ. ಅಲ್ಲದೇ ಜಿಲ್ಲೆಯಿಂದ ಸರಕಾರಕ್ಕೆ ಅಂದಾಜು ಎರಡೂವರೆ ಕೋಟಿ ರೂಪಾಯಿ ರಾಜಧನ ಜಮಾ ಆಗಿರುತ್ತದೆ. ಈ ಮೊದಲು ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದಾಗ ಯಾವ ಮಟ್ಟಿಗೆ ರಾಜಧನ ನಷ್ಟ ಆಗಿರಬಹುದು ಎಂದು ನಮ್ಮ ಸಂಘವು ಈ ಸಂದರ್ಭದಲ್ಲಿ ಪ್ರಶ್ನಿಸಬಯಸುತ್ತಿದೆ. ಹೀಗಿರುವಾಗ ಅಕ್ರಮ ಮರಳುಗಾರಿಕೆ ಮಾಡುವ ಮತ್ತು ಅದರ ರುಚಿ ನೋಡಿದ ಕೆಲವರು ಹಸಿರು ಪೀಠದಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಕ್ರಮ ಮರಳನ್ನು ದುಬಾರಿ ಬೆಲೆಗೆ ಜನತೆಗೆ ಮಾರಾಟ ಮಾಡಿ ಹಣ ಮಾಡುವ ದುರುದ್ದೇಶದಿಂದ ಇಂತಹ ಪ್ರಕರಣ ದಾಖಲಿಸಿದ್ದಾರೆ ಎಂದು ಸಂಘವು ತಿಳಿಸಿದೆ. ಇದರ ಹಿಂದೆ ಕೆಲವು ಜನ ಪ್ರತಿನಿಧಿಗಳ ಕೈವಾಡ ಇದೆ ಎನ್ನುವ ಅನುಮಾನವನ್ನು ಸಂಘ ವ್ಯಕ್ತಪಡಿಸಿದೆ.

ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯು ಇಂತಹ ಅಕ್ರಮ ಮರಳುಗಾರಿಕೆ ತಡೆಗಟ್ಟಲು ಇಲ್ಲಿಯವರೆಗೆ ಮಾಡಿರುವ ಪ್ರತಿಯೊಂದೂ ಕ್ರಮವನ್ನು ನಮ್ಮ ಸಂಘವು ತುಂಬು ಹೃದಯದಿಂದ ಶ್ಲಾಘಿಸುತ್ತದೆ ಮತ್ತು ಇದೇ ರೀತಿ ಅಕ್ರಮ ಮರಳುಗಾರಿಯನ್ನು ತಡೆಯಬೇಕೆಂದು ನಮ್ಮ ಸಂಘವು ವಿನಂತಿಸಿಕೊಳ್ಳುತ್ತದೆ. ನ್ಯಾಯಪೀಠದಲ್ಲಿ ಈ ಪ್ರಕರಣವು ವಿಚಾರಣೆ ಹಂತದಲ್ಲಿದ್ದು, ಮರಳುಗಾರಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಬೇಕಾದ ಎಲ್ಲ ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳು ನೀಡಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಇತ್ಯಂರ್ಥಗೊಂಡು ತೀರ್ಪು ಬರುವುದೆನ್ನುವ ವಿಶ್ವಾಸ ಇದೆ. ಹಾಗೆಯೇ ಮುಂದಿನ ದಿನಗಳಲ್ಲಿ ಮತ್ತೆ ಸಕ್ರಮ ಮರಳುಗಾರಿಕೆ ಆರಂಭಗೊಳ್ಳುತ್ತದೆ ಎನ್ನುವ ವಿಶ್ವಾಸದಿಂದ ಜನತೆಗೆ ಕಡಿಮೆ ಬೆಲೆಗೆ ಮರಳು ಸಿಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top