ಸಿದ್ದಾಪುರ: ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಮೂಲಕ ಚರಿತ್ರೆಯಲ್ಲಿ ಅಜರಾಮರರಾಗಿದ್ದರೆ, ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಜೀವಂತವಾಗಿರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾಹಿತಿಗಳು ಎಂದಿಗೂ ದಿವಂಗತರಾಗುವುದಿಲ್ಲ ಎಂದು ರಾಜ್ಯ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು.
ಪಟ್ಟಣದ ಶಂಕರಮಠದಲ್ಲಿ ಧರ್ಮಶ್ರೀ ಫೌಂಡೇಶನ್ ಆಯೋಜಿಸಿದ್ದ ಮಗೇಗಾರಿನ ಶ್ರೀಪಾದ ಹೆಗಡೆ ಅವರು ಬರೆದ ‘ಹಾವಿನ ಹಂದರದಿಂದ ಹೂವ ತಂದವರು’ ಕೃತಿ ಲೋಕಾರ್ಪಣೆ ಮಾಡಿ ಗುರುವಾರ ಮಾತನಾಡಿದರು.
ಸಿದ್ದಾಪುರದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆ ಓದಿದರೆ ತಾಲೂಕಿನ ಕುರಿತು ಗೌರವ ವೃದ್ಧಿಸುತ್ತದೆ. ಕೃತಿಯನ್ನು ಎಲ್ಲೆಡೆ ಪ್ರಸರಣವಾಗುವಂತೆ ಮಾಡುವಲ್ಲಿ ಪ್ರಯತ್ನಿಸುತ್ತೇನೆ ಎಂದರು. ಹಿರಿಯ ಸಾಹಿತಿ ಶಾ.ಮಂ. ಕೃಷ್ಣರಾವ್ ಮಾತನಾಡಿ ಕಾದಂಬರಿ ಎನ್ನುವಂತಹುದು ಹೀಗೇ ಇರಬೇಕೆಂಬ ಚೌಕಟ್ಟನ್ನು ಹೊಂದಿಲ್ಲ. ದುರ್ಗಾಸ್ಥಮಾನದಂತಹ ಕಾದಂಬರಿಯಲ್ಲಿಯೂ ಕಾಲ್ಪನಿಕ ಸನ್ನಿವೇಶಗಳಿವೆ.ಜಿಲ್ಲೆಯಾದ್ಯಂತ ನಡೆದ ಸ್ವಾತಂತ್ರ್ಯ ಸಂಗ್ರಾಮದ ಸಮಗ್ರ ಚರಿತ್ರೆಯನ್ನು ಹೊರತರುವಂತಾಗಬೇಕು ಎಂದರು.
ಧರ್ಮಶ್ರೀ ಫೌಂಡೇಶನ್‌ನ ಗೌರವಾಧ್ಯಕ್ಷ ರಾಮಮೋಹನ ಹೆಗಡೆ ಅಧ್ಯಕ್ಚತೆವಹಿಸಿದ್ದರು. ಆಕಾಶವಾಣಿ ಕೇಂದ್ರದ ನಿವೃತ್ತ ಅಧಿಕಾರಿ ದಿವಾಕರ ಹೆಗಡೆ ಕೆರೆಹೊಂಡ ಕೃತಿ ಪರಿಚಯಿಸಿದರು. ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಖ್ಯಾತ ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ,ಕೃತಿಕಾರ ಶ್ರೀಪಾದ ಹೆಗಡೆ ಮಗೇಗಾರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕರನಿರಾಕರಣೆ ಚಳವಳಿಯಲ್ಲಿ ಪ್ರಮುಖವಾಗಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಹಾಗೂ ಕೃತಿಕಾರ ಶ್ರೀಪಾದ ಹೆಗಡೆ ಮಗೇಗಾರ ಮತ್ತು ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು ಕೃತಿಕಾರ ಕೆಕ್ಕಾರ ನಾಗರಾಜ ಭಟ್ಟ ಅವರನ್ನು ಧರ್ಮಶ್ರೀ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.
ಧರ್ಮಶ್ರೀ ಫೌಂಡೇಶನ್ ಕಾರ್ಯಾಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ಪ್ರಾಸ್ತಾವಿಕ ಮಾತನಾಡಿದರು. ವೇ. ಪರಮೇಶ್ವರಯ್ಯ ಕಾನಳ್ಳಿಮಠ ಸ್ವಾಗತಿಸಿದರು. ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಹಾಗೂ ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು. ಶಾಮಲಾ ಆರ್.ಹೆಗಡೆ ವಂದಿಸಿದರು.