Slide
Slide
Slide
previous arrow
next arrow

ನವರಾತ್ರಿ ಆಚರಣೆಗೆ ಸ್ವರ್ಣವಲ್ಲೀ ಸಂಸ್ಥಾನದ ಸ್ಪಷ್ಟೀಕರಣ

300x250 AD

ಶಿರಸಿ: ಈ ವರ್ಷ ಶರನ್ನವರಾತ್ರಿಯಲ್ಲಿ (ಅಶ್ವಿನ ಶುಕ್ಲ ಪಕ್ಷದಲ್ಲಿ) ತಿಥಿಗಳು ವೃದ್ಧಿ ಮತ್ತು ಹ್ರಾಸಕ್ಕೊಳಪಟ್ಟಿವೆ. ಆದ್ದರಿಂದ ನವರಾತ್ರಿ ವ್ರತವನ್ನು ಆಚರಿಸುವ ಕುರಿತು ಶಿಷ್ಯರಲ್ಲಿ ಉಂಟಾದ ಗೊಂದಲಗಳಿಗೆ ಸ್ವರ್ಣವಲ್ಲೀ ಮಹಾ ಸಂಸ್ಥಾನ ಸ್ಪಷ್ಟೀಕರಣ ಬಿಡುಗಡೆಗೊಳಿಸಿದೆ.

ತಿಥಿ ವೃದ್ಧಿಯಾದಾಗ (ಎರಡು ದಿನ ಬಂದಾಗ) ಆ ತಿಥಿ ಪ್ರಯುಕ್ತ ದೇವಿ ಪೂಜೆಯನ್ನು ಎರಡು ದಿವಸ ಮಾಡಬೇಕು. ಈ ಬಾರಿ ನವರಾತ್ರಿಯಲ್ಲಿ ತೃತಿಯಾ ತಿಥಿಯು ಎರಡು ದಿನ (ಅಕ್ಟೋಬರ್ 5 ಮತ್ತು 6 ರಂದು) ಬಂದಿರುವುದರಿಂದ ಆ ಎರಡು ದಿನವೂ ತೃತೀಯಾ ಪ್ರಯುಕ್ತ ವಿಧಿಸಿದ ದೇವೀ ಪೂಜೆಯನ್ನು ಆಚರಿಸಬೇಕು. ಅಷ್ಟಮೀ ಮತ್ತು ನವಮೀ ಯೋಗವು ಅಪರಾಹ್ನದಲ್ಲಿ ಆದಾಗ ಅದೇ ದಿನ ಎರಡೂ ತಿಥಿ ಪ್ರಯುಕ್ತವಾದ ವಿಧಿಯನ್ನು ಆಚರಿಸಬೇಕು. ಸಪ್ತಮಿಯಿಂದ ಕೂಡಿದ ಅಷ್ಟಮೀ ದುರ್ಗಾಷ್ಟಮೀ ಆಚರಣೆಗೆ ಪ್ರಶಸ್ತವಲ್ಲ. ಈ ಬಾರಿ ಅಷ್ಟಮಿಯಂದು (ಅಕ್ಟೋಬರ್ 11 ರಂದು) ಅಪರಾಹ್ನ ನವಮಿ ತಿಥಿಯು ಬಂದಿರುವುದರಿಂದ ಅಂದೇ ಅಷ್ಟಮೀ ದೇವೀ ಪೂಜೆಯೊಂದಿಗೆ ನವಮೀ ದೇವಿಯ ಪೂಜೆಯನ್ನೂ ನೆರವೇರಿಸಬೇಕು. ಮರುದಿನ ನವಮೀ(ಅಕ್ಟೋಬರ್ 12)ಯಂದೇ ದಶಮೀ ವಿಧಿಯನ್ನು ಆಚರಿಸಬೇಕು. ಒಂಬತ್ತು ದಿನ ನವರಾತ್ರಿಯ ವ್ರತವನ್ನು ಆಚರಿಸುವವರು ಈ ವಿಧಾನವನ್ನು ಅನುಸರಿಸಬೇಕು ಎಂದು ತಿಳಿಸಲಾಗಿದೆ.
ಮೂರು ದಿನ ದೇವೀ ಪೂಜೆಯನ್ನು ನಡೆಸಿಕೊಂಡು ಬರುವವರು ಸಪ್ತಮಿಯಂದು ಅಕ್ಟೋಬರ್ 10ರಂದು ದೇವಿಯನ್ನು ಆವಾಹಿಸಿ ಅಷ್ಟಮಿಯಂದು (ಅಕ್ಟೋಬರ್ 11ರಂದು) ಅಷ್ಟಮಿ ಪೂಜೆಯೊಂದಿಗೆ ನವಮಿಯ ಪೂಜೆಯನ್ನೂ ನೆರವೇರಿಸಿ ಮರುದಿನ ನವಮಿಯಂದು (ಅ. 12ರಂದು) ದಶಮೀ ವಿಧಿಯನ್ನು ಆಚರಿಸಬೇಕು. ಉಪಾಂಗ ಲಲಿತಾ ವ್ರತಕ್ಕೆ (ಲಲಿತಾ ಪಂಚಮೀ) ಅಪರಾಹ್ನ ವ್ಯಾಪಿನಿಯಾದ ಪಂಚಮಿಯು ಹೇಳಲ್ಪಟ್ಟಿದೆ. ಚತುರ್ಥಿ ತಿಥಿಯಂದು (ಅ.7ರಂದು) ಅಪರಾಹ್ನ ಪಂಚಮೀ ಬಂದಿರುವುದರಿಂದ ಅಂದೇ ಲಲಿತಾಪಂಚಮೀ ವ್ರತ ಆಚರಿಸಬೇಕು.

ಶಾರದಾ ಪೂಜೆ :
“ಮೂಲೇನಾವಾಹಯೇತ್ ದೇವೀಂ– –ಶ್ರವಣೇನ ವಿಸರ್ಜಯೇತ್” ಎಂಬ ಉಕ್ತಿಯಂತೆ ಮೂಲಾ ನಕ್ಷತ್ರದಲ್ಲಿ ಶಾರದಾ ಸ್ಥಾಪನೆ ಮಾಡಿ ಶ್ರವಣ ನಕ್ಷತ್ರದಲ್ಲಿ ವಿಸರ್ಜನೆ ಮಾಡಬೇಕೆಂಬುದು ವಿಧಿ. ಅದರಂತೆಯೇ ಈ ವರ್ಷ ಷಷ್ಠಿಯಂದು (ಅಕ್ಟೋಬರ್ 9ರಂದು) ಮೂಲಾ ನಕ್ಷತ್ರ ಬಂದಿರುವುದರಿಂದ ಶಾರದೆಯನ್ನು ಆವಾಹಿಸಿ ನವಮೀ (ಅಕ್ಟೋಬರ್ 12ರಂದು)ಯಂದು ಶ್ರವಣ ನಕ್ಷತ್ರವಿರುವುದರಿಂದ ಅದೇ ದಿನ ವಿಸರ್ಜನೆ ಮಾಡಬೇಕು. ತ್ರಿದಿನ ದೇವೀ ಪೂಜೆಯನ್ನು ಮಾಡುವವರೂ ಕೂಡ ಇದೇ ವಿಧಾನವನ್ನು ಅನುಸರಿಸಬೇಕು. ಅಕ್ಟೋಬರ್ 9 ರಂದು ಶಾರದಾ ಸ್ಥಾಪನೆ ಮಾತ್ರ ಮಾಡಿ ಮರುದಿನ ಅಕ್ಟೋಬರ್ 10 ರಂದು ತ್ರಿದಿನ ದೇವೀ ಪೂಜೆಯನ್ನು ಆರಂಭಿಸಬೇಕು.
ಅಪರಾಹ್ನ ವ್ಯಾಪಿನಿಯಾದ ದಶಮೀ ತಿಥಿಯಂದು ದಶಮೀ ವಿಧಿಯನ್ನು ಆಚರಿಸಲು ಹೇಳಿದೆ. ಅದು ಶ್ರವಣ ನಕ್ಷತ್ರದಿಂದ ಕೂಡಿದ್ದರೆ ಶ್ರೇಷ್ಠ. ಈ ಸಲ ನವಮಿಯಂದೇ (ಅಕ್ಟೋಬರ್ 12 ರಂದು) ಅಪರಾಹ್ನ ದಶಮೀ ಬಂದಿರುವುದರಿಂದ, ಶ್ರವಣ ನಕ್ಷತ್ರದಿಂದಲೂ ಕೂಡಿರುವುದರಿಂದ ಅಂದೇ ದಶಮೀ ವಿಧಿಯನ್ನು ವಿಧಿಸಲಾಗಿದೆ ಎಂದು ಪ್ರಕಟನೆಯಲ್ಲಿ ವಿವರಿಸಿದೆ.

300x250 AD

ಆಶ್ವಿನ ಶುಕ್ಲ ಷಷ್ಠೀ ಬುಧವಾರ 09.10.2024- ಶಾರದಾ ಸ್ಥಾಪನೆ
ಆಶ್ವಿನ ಶುಕ್ಲ ಸಪ್ತಮೀ ಗುರುವಾರ 10.10.2024 – ತ್ರಿದಿನದೇವೀ ಪೂಜೆ ಪ್ರಾರಂಭ
ಆಶ್ವಿನ ಶುಕ್ಲ ಅಷ್ಟಮೀ ಶುಕ್ರವಾರ 11.10.2024 – ದುರ್ಗಾಷ್ಟಮೀ, ಮಹಾನವಮೀ
ಆಶ್ವಿನ ಶುಕ್ಲ ನವಮೀ ಶನಿವಾರ 12.10.2024 – ಶಾರದಾ ವಿಸರ್ಜನೆ, ದೇವೀ ವಿಸರ್ಜನೆ, ವಿಜಯಾ ದಶಮೀ

Share This
300x250 AD
300x250 AD
300x250 AD
Back to top