ದಾಂಡೇಲಿ : ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ನಗರದ ಹಳೆ ನಗರಸಭೆಯ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ವರ್ಷದ ನವರಾತ್ರಿ ಉತ್ಸವಕ್ಕೆ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮದ ಮೂಲಕ ಗುರುವಾರ ಬೆಳಿಗ್ಗೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.
ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಟಿ. ಎಸ್.ಬಾಲಮಣಿ ಹಾಗೂ ಅಶ್ವಿನಿ ಬಾಲಮಣಿ ದಂಪತಿ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನಾ ಪೂಜಾ ಕಾರ್ಯದಲ್ಲಿ ಸೇವಾಕರ್ತೃಗಳಾಗಿದ್ದರು. ಗಿರಿಧರ್ ಭಟ್ ಅವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.
ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸುನೀಲ ಹೆಗಡೆ ಭಾಗವಹಿಸಿ ಇದು ದಾಂಡೇಲಿ ಜನತೆಯ ಉತ್ಸವ. ಸರ್ವರು ಭಾಗವಹಿಸುವ ಮೂಲಕ ನವರಾತ್ರಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಬೇಕು. ನವರಾತ್ರಿಯಲ್ಲಿ ದುರ್ಗಾಮಾತೆಯ ಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತಿದೆ. ಅಂತೆಯೇ ಇಲ್ಲಿಯೂ ದುರ್ಗಾಮಾತೆಗೆ ಪ್ರತಿದಿನವೂ ವಿಶೇಷ ಪೂಜಾರಾಧನೆಗಳನ್ನು ನೆರವೇರಿಸಲಾಗುತ್ತದೆ. ಪ್ರತಿದಿನವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಅನಂತರ ದಾಂಡಿಯಾ ಉತ್ಸವ ನಡೆಯಲಿದೆ. ಆಹಾರ ಮೇಳದ ಜೊತೆಗೆ ವಿವಿಧ ಮಳಿಗೆಗಳು ಜನರನ್ನು ಆಕರ್ಷಿಸಲಿದೆ. ಎಲ್ಲ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸುವರ್ಣ ಸುನೀಲ ಹೆಗಡೆ ಹಾಗೂ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತಾಭಿಮಾನಿಗಳು ಭಾಗವಹಿಸಿದ್ದರು.