ಹೊನ್ನಾವರ ಪ.ಪಂ. ಸಾಮಾನ್ಯ ಸಭೆಯಲ್ಲಿ ನೆನೆಗುದಿಗೆ ಬಿದ್ದ ಕಾಮಗಾರಿ ಕುರಿತು ಚರ್ಚೆ
ಹೊನ್ನಾವರ: ಶರಾವತಿ ಕುಡಿಯುವ ನೀರಿನ ಯೋಜನೆಯಿಂದ ಪಟ್ಟಣಕ್ಕೆ ಸರಬರಾಜಾಗುತ್ತಿರುವ ನೀರಿನ ಸಂಪರ್ಕವನ್ನು ಇನ್ನೂ ನೀಡದೆ ಇರುವ ಕಡೆ ಸಂಪರ್ಕ ಕಲ್ಪಿಸುವಂತೆ ಹೊನ್ನಾವರ ಪಟ್ಟಣ ಪಂಚಾಯತ ಸರ್ವ ಸಾಧಾರಣ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪಟ್ಟಣ ಪಂಚಾಯತ ಅಧ್ಯಕ್ಷ ನಾಗರಾಜ್ ಭಟ್ಟ ಇವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿ ಅನುಷ್ಠಾನಗೊಳ್ಳದೆ ನೆನಗುದಿಗೆ ಬಿದ್ದಿರುವ ಯುಜಿಡಿ ಕಾಮಗಾರಿ ಅನುಷ್ಠಾನಗೊಳಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕೆಲವು ಸದಸ್ಯರು ಈ ಯೋಜನೆ ಬೇಡ ಎಂದರೆ, ಇನ್ನೂ ಕೆಲವು ಸದಸ್ಯರು, ಅಧ್ಯಕ್ಷರು, ಸರಕಾರದ ಯೋಜನೆ ಆಗಿರುವುದರಿಂದ ತಿರಸ್ಕಾರ ಮಾಡುವಂತಿಲ್ಲ, ಯೋಜನೆಯ ಉದ್ದೇಶದಂತೆ ಬಳಸಿದ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಿ, ಯೋಜನೆಯ ಉಪಯೋಗ ಮತ್ತು ಸಾಧಕ ಬಾಧಕ ಬಗ್ಗೆ ಸಮಾಲೋಚಿಸಿ ನಿರ್ಣಯಿಸುವ ಬಗ್ಗೆ ತೀರ್ಮಾನಿಸಲಾಯಿತು.
ಮುಂದಿನ ಒಂದು ವರ್ಷದ ಅವಧಿಗೆ ಸ್ಥಾಯಿ ಸಮಿತಿ ರಚನೆ ನಿಯಮಾವಳಿಯಂತೆ ಮಾಡಬೇಕು, ಈ ಹಿಂದೆ ಕೂಡ ನಾನು ಆಕ್ಷೇಪ ಮಾಡಿದ್ದೆ, ಈಗಲೂ ನನ್ನ ತಕರಾರು ಇದೆ ಎಂದು ಸದಸ್ಯ ಅಜಾದ್ ಅಣ್ಣಿಗೇರಿ ಆಕ್ಷೇಪ ವ್ಯಕ್ತಪಡಿಸಿದರು. ಉಳಿದ ಸದಸ್ಯರು ಒಮ್ಮತದ ನಿರ್ಣಯ ಮಾಡಿ ಹನ್ನೊಂದು ಸದಸ್ಯರ ನೂತನ ಸ್ಥಾಯಿ ಸಮಿತಿ ರಚನೆ ಮಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು ಮುಂದಿನ ಸಭೆಯಲ್ಲಿ ನಡೆಸಲು ನಿರ್ಣಯ ತೆಗೆದುಕೊಂಡರು.
ಬೀದಿದೀಪ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಹಾಲಿ ದರಪಟ್ಟಿಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎಂದು ಅರ್ಜಿ ಕೊಟ್ಟಿರುವ ಕುರಿತು ಚರ್ಚೆ ನಡೆದು, ಕೆಲವರು ಬೇರೆ ಗುತ್ತಿಗೆದಾರರಿಗೆ ನಿರ್ವಹಣೆ ಕೊಡಿ, ಅವರು ಫೋನ್ ಮಾಡಿದರು ರಿಸೀವ್ ಮಾಡುವುದಿಲ್ಲ ಎಂದರು. ಸುದೀರ್ಘ ಚರ್ಚೆ ನಡೆದು ಸದ್ಯದ ಮಟ್ಟಿಗೆ ಅವರಿಗೆ ಮನವರಿಕೆ ಮಾಡಿ ನಿರ್ವಹಣೆ ಮಾಡುವಂತೆ ಹೇಳಲು ನಿರ್ಣಯಿಸಲಾಯಿತು.
ದುರ್ಗಾಕೇರಿ ದುರ್ಗಾ ದೇವಸ್ಥಾನ ಮತ್ತು ಮಾಸ್ತಿಕಟ್ಟೆ ಚೌಕದ ಹತ್ತಿರ ಇರುವ ಹೈಮಾಸ್ಟ್ ದುರಸ್ತಿ ಪಡಿಸಲು ಸೂಚಿಸಲಾಯಿತು. ಗಾಂಧಿ ನಗರದಲ್ಲಿರುವ ಪ. ಪಂ. ಪುರಭವನ ಅನುದಾನ ಬಳಸಿ ನವೀಕರಣ ಮಾಡಲು ನಿರ್ಣಯ ತೆಗೆದುಕೊಳ್ಳಲಾಯಿತು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪೊಲೀಸ್ ಠಾಣೆ ಸಮೀಪ ತಲೆ ಎತ್ತಿರುವ ಮತ್ತು ಪಟ್ಟಣದ ಉಳಿದೆಡೆ ಇರುವ ಗೂಡಂಗಡಿ ತೆರವು ಗೊಳಿಸಲು ನಿರ್ಣಯಿಸಲಾಯಿತು. ಸಾರ್ವಜನಿಕರ ಮನವಿಯಂತೆ ಹೆದ್ದಾರಿ ಪಕ್ಕದ ಗೂಡಂಗಡಿ ತೆರವು ಗೊಳಿಸಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಪಟ್ಟಣ ಪಂಚಾಯತಕ್ಕೆ ಪತ್ರ ಬರೆದಿದ್ದರು. ಅವರ ಮನವಿಯಂತೆ ಪ. ಪಂ. ಸಭೆಯಲ್ಲಿ ಚರ್ಚೆ ನಡೆದು ಹೆದ್ದಾರಿ ಪಕ್ಕ ಇರುವ ಗೂಡಂಗಡಿಳನ್ನು ತೆರವು ಗೊಳಿಸಲು ನಿರ್ಣಯ ಕೈಗೊಂಡರು.
ಪಟ್ಟಣ ಪಂಚಾಯತಕ್ಕೆ ಜನ ಯಾಕೆ ಬರುವುದಿಲ್ಲ, ಪ. ಪಂ. ನಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ. ವಾಟರ್ ಮೇನ್ ಗಳು ನೀರು ಬಿಡುವುದರ ಹೊರತಾಗಿ, ಬಿಡುವು ಇದ್ದಾಗ ಇನ್ನಿತರ ಕೆಲಸಗಳನ್ನು ಮಾಡಲು ತಿಳಿಸಿ, ಪ. ಪಂ. ವ್ಯಾಪ್ತಿಯಲ್ಲಿ ಕಸರಾಸಿ ಬಿದ್ದಲ್ಲಿ, ಇನ್ನಿತರ ಸಮಸ್ಯೆ ಆದಲ್ಲಿ ಪೌರ ಕಾರ್ಮಿಕರೆ ಹುಡುಕಿ ಹೋಗಬೇಕಿಲ್ಲ, ಪ. ಪಂ. ಸಂಬಳ ಪಡೆಯುವ ಉಳಿದವರು ಸ್ವಲ್ಪ ಗಮನ ಕೊಡಿ, ಸದಸ್ಯರು ಕೇವಲ ಐದು ವರ್ಷ ಮಾತ್ರ ಕೆಲಸ ಮಾಡುತ್ತಾರೆ. ನೌಕರರು 60 ವರ್ಷ ಆಗುವ ತನಕ ಕೆಲಸ ಮಾಡುತ್ತಾರೆ. ಪಟ್ಟಣದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿ ನಿಭಾಯಿಸಿ ಎಂದು ಸದಸ್ಯ ಸುಭಾಸ್ ಹರಿಜನ ಏರು ದ್ವನಿಯಲ್ಲಿ ಹೇಳಿದರು.
ವೇದಿಕೆಯಲ್ಲಿ ಪ,ಪಂ ಉಪಾಧ್ಯಕ್ಷ ಸುರೇಶ ಹೊನ್ನಾವರ, ಪ. ಪಂ. ಮುಖ್ಯಾಧಿಕಾರಿ ಯೇಶು ಬೆಂಗಳೂರು ಉಪಸ್ಥಿತರಿದ್ದರು. ಸದಸ್ಯರು ಸಭೆಯಲ್ಲಿ ಹಾಜರಿದ್ದರು .