ರಾಜ್ಯ ಸರ್ಕಾರದ ಕ್ರಮಕ್ಕೆ ಸ್ವಾಗತ: ರವೀಂದ್ರ ನಾಯ್ಕ
ಶಿರಸಿ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಕ್ಷೇತ್ರವನ್ನು ಗುರುತಿಸುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಕಸ್ತೂರಿರಂಗನ್ ವರದಿಗೆ ಸಚಿವ ಸಂಪುಟವು ತಿರಸ್ಕರಿಸಲು ತೀರ್ಮಾನಿಸಿದ್ದು, ರಾಜ್ಯ ಸರ್ಕಾರದ ಜನಪರ ನಿಲುವಿಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸ್ವಾಗತಿಸಿದ್ದಾರೆ.
ಅವರು ಕೇಂದ್ರ ಸರ್ಕಾರದ ಕರಡು ಕಸ್ತೂರಿರಂಗನ್ ವರದಿ ಅಭಿಪ್ರಾಯ ಮಂಡಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದ ತೀರ್ಮಾನ ಪ್ರಕಟಿಸಿದ ಜಿಲ್ಲೆಯಲ್ಲಿ ಹೋರಾಟಕ್ಕೆ ಸಹಕರಿಸಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರನ್ನ ಬೆಂಗಳೂರಿನ ಗೃಹ ಕಛೇರಿಯಲ್ಲಿ ಭೇಟಿಯಾಗಿ ಸರ್ಕಾರದ ಪರವಾಗಿ ಅಭಿನಂದಿಸಿ ಮೇಲಿನಂತೆ ಹೇಳಿದರು.
ಕರಡು ವರದಿಯನ್ನ ತಿರಸ್ಕರಿಸಲು ಪಶ್ಚಿಮ ಘಟ್ಟ ಪ್ರದೇಶದ ಜನಪ್ರತಿನಿಧಿಗಳು ಆಮೂಲಾಗ್ರವಾಗಿ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ವರದಿ ಅವೈಜ್ಞಾನಿಕ ಅಂಶಗಳ ಕುರಿತು ವ್ಯಾಪಕ ಟೀಕೆಗೆ ಕಾರಣವಾಗಿತ್ತು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಒಂದು ಲಕ್ಷ ಕುಟುಂಬದಿಂದ ಆಕ್ಷೇಪಣೆ:
ಕಳೆದ ೧೧ ವರ್ಷಗಳ ಹಿಂದೆ ಮಂಡಿಸಲಾದ ಕರಡು ಕಸ್ತೂರಿರಂಗನ್ ವರದಿ ಕುರಿತು ಹೋರಾಟಗಾರರ ವೇದಿಕೆಯು ವ್ಯಾಪಕವಾದ ಹೋರಾಟ, ಜನಜಾಗೃತಿ ಹಾಗೂ ಒಂದು ಲಕ್ಷ ಕುಟುಂಬದಿಂದ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸುವ ಅಭಿಯಾನ ಮುಂತಾದ ವಿವಿಧ ರೀತಿಯ ವ್ಯಾಪಕವಾದ ಹೋರಾಟವನ್ನ ಹಮ್ಮಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರ ಕರಡು ವರದಿ ತಿರಸ್ಕರಿಸಲು ಹೋರಾಟಗಾರರ ವೇದಿಕೆಯು ಒತ್ತಾಯಿಸಲಾಗಿತ್ತು ಎಂದು ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.