ಶಿರಸಿ: ತಾರಗೋಡ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ತಾರಗೋಡ ಇದರ 39 ನೇ ವರ್ಷದ 2023-24 ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯು ಸೆ.22ರಂದು ಹುಳಗೋಳ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಸಹಕಾರಿ ಸಂಘ ನಿ. ತಾರಗೋಡ ಇದರ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ನಾರಾಯಣ ವೆಂಕಟ್ರಮಣ ಹೆಗಡೆ ನಡಗೋಡ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿಯನ್ನು ಸಭೆಗೆ ತಿಳಿಸುತ್ತಾ, ಸಂಘವು ಪ್ರಾರಂಭವಾಗಿ 39 ವರ್ಷ ಪೂರೈಸಿ 40 ನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದಕ್ಕೆ ತಮ್ಮೆಲ್ಲರ ವಿಶ್ವಾಸ ಪೂರಿತ ಸಹಕಾರವೇ ಕಾರಣ ಎಂದರು.
ಸಂಘವು 225 ಶೇರು ಸದಸ್ಯರನ್ನು ಹೊಂದಿದ್ದು, ರೂ.45,260 ಶೇರು ಬಂಡವಾಳವನ್ನು ಹೊಂದಿದೆ. ವರದಿ ವರ್ಷದಲ್ಲಿ ರೂ.40,90,491ಮೊತ್ತದ 1,35,887 ಲೀ. ಗಳಷ್ಟು ಹಾಲನ್ನು ಉತ್ಪಾದಕರಿಂದ ಖರೀದಿಸಿ ರೂ.10,28,432 ಮೊತ್ತದ 24,164ಲೀ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿ, ಧಾರವಾಡ ಒಕ್ಕೂಟಕ್ಕೆ 1,15,074 ಕೆ.ಜಿ. ಹಾಲನ್ನು ರೂ.37,89,286 ಕ್ಕೆ ಮಾರಾಟ ಮಾಡಿರುತ್ತದೆ.
ಇದಲ್ಲದೇ ಸಂಘವು ಪಶು ಆಹಾರ, ಖನಿಜ ಮಿಶ್ರಣ, ನೆಕ್ಕು ಬಿಲ್ಲೆ, ಮೇವಿನ ಬೀಜ, ಕರುಗಳ ಪಶು ಆಹಾರ, ರಸಮೇವು ಮಾರಾಟ ಹಾಗೂ ಇತರೇ ವ್ಯವಹಾರದಿಂದ ವ್ಯಾಪಾರಿ ಲಾಭ ರೂ.6,80,537 ಲಾಭ ಗಳಿಸಿ ಆಡಳಿತಾತ್ಮಕ ವೆಚ್ಚ ಕಳೆದು ರೂ.3,04,365 ನಿವ್ವಳ ಲಾಭ ಗಳಿಸಿರುತ್ತದೆ. ಹಾಗೂ ಈ ಲಾಭದಲ್ಲಿ ಹಾಲು ಉತ್ಪಾದಕರಿಗೆ ಬೋನಸ್ಸು ಪ್ರತೀ ಲೀ. ಗೆ ರೂ.1.04 ಪೈಸೆ ಹೆಚ್ಚಿಗೆ ಸಿಗುವಂತಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಎಸ್.ಭಟ್ ನಡಗೋಡ ಹಾಗೂ ಎಸ್.ಎಸ್.ಹೆಗಡೆ ತಾರಗೋಡ ಮಾತನಾಡುತ್ತಾ, ಎಲ್ಲಾ ರೈತ ಬಾಂಧವರು ಹೈನುಗಾರಿಕೆಯನ್ನು ಆಸಕ್ತಿಯಿಂದ ಮಾಡಿದಾಗ ಮಾತ್ರ ಲಾಭ ಗಳಿಕೆ ಸಾಧ್ಯ ಮತ್ತು ನಮ್ಮ ಕೃಷಿ ಭೂಮಿಗೂ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ಸಿಗುತ್ತದೆ. ಇದರಿಂದ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆಮಾಡಿ ಕೃಷಿಯಲ್ಲಿಯೂ ಕೂಡ ಲಾಭ ಗಳಿಸಬಹುದು. ಮಣ್ಣಿನ ಫಲವತ್ತತೆಯನ್ನೂ ಕೂಡ ಕಾಪಾಡಬಹುದು ಎಂದು ಹೇಳಿದರು.
ಸಂಘದ ಪ್ರಾರಂಭದ ದಿನಗಳಲ್ಲಿ ಸಂಘದ ಕೆಲಸ ಕಾರ್ಯಗಳಿಗೆ ತಮ್ಮ ಮನೆಯಲ್ಲಿ ಸ್ಥಳಾವಕಾಶ ಕಲ್ಪಿಸಿದ, ಸಂಘದ ಹಿರಿಯ ಸದಸ್ಯರೂ ಆದ ಕೇಶವ ವೆಂಕಟ್ರಮಣ ಹೆಗಡೆ ತಾರಗೋಡ ಇವರು ದೈವಾಧೀನರಾಗಿರುತ್ತಾರೆ.
ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಭೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಭೆಯು ಪ್ರಾರ್ಥಿಸಿತು.
ನಂತರ ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು. ಸನ್ಮಾನಿತರಾದ ಮಹಾಬಲೇಶ್ವರ ನ. ಭಟ್ಟ ನಡಗೋಡ, ಕಮಲಾಕರ ಮಾ. ಭಟ್ಟ ತಾರಗೋಡ, ಭಾಸ್ಕರ ರಾ. ಹೆಗಡೆ
ಅಂದಳ್ಳಿ, ಅನಂತ ಜಾ. ಗೌಡ ಸದಾಶಿವಳ್ಳಿ ಹಾಗೂ ಶ್ರೀಮತಿ ಮಾಲಾ ಲಕ್ಷ್ಮಣ ಶೆಟ್ಟಿ ಬಾಳಗಾರ ಇವರುಗಳಿಗೆ ದಂಪತಿ ಸಮೇತ ಫಲ ಪುಷ್ಪ ಆದರಾತಿಥ್ಯಗಳೊಂದಿಗೆ ಸನ್ಮಾನಿಸಲಾಯಿತು.
ಸಂಘದ ಮುಖ್ಯಕಾರ್ಯನಿರ್ವಾಹಕರಾದ ಗುರುಪ್ರಸಾದ ಹೆಗಡೆ ನಡಗೋಡ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ವಾರ್ಷಿಕ ವರದಿ, ಜಮಾ-ಖರ್ಚು, ಆಸ್ತಿ- ಜವಾಬ್ದಾರಿ ಪತ್ರಿಕೆಯನ್ನು ಮಂಡಿಸಿದರು.
ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಗಣಪತಿ ಹೆಗಡೆ ಕೂಗಲಕುಳಿ ಅವರು ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಿಗೆ,ಆಡಳಿತ ಮಂಡಳಿಯ ಸದಸ್ಯರಿಗೆ, ಹಾಲು ಉತ್ಪಾದಕರಿಗೆ,ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.