ದಾಂಡೇಲಿ : ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ಮೂರನೇ ವರ್ಷದ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆಗಳನ್ನು ನಡೆಸಲಾಗಿದ್ದು, ಎಂದಿನಂತೆ ಈ ವರ್ಷವೂ ನಗರದ ಜನತೆ ಈ ಉತ್ಸವದಲ್ಲಿ ಭಾಗವಹಿಸಿ, ಉತ್ಸವದ ಯಶಸ್ಸಿಗೆ ಸಹಕರಿಸಬೇಕೆಂದು ನವರಾತ್ರಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು.
ಅವರು ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ನವರಾತ್ರಿ ಉತ್ಸವದ ಸಿದ್ಧತೆ ಹಾಗೂ ಕಾರ್ಯಕ್ರಮದ ಕುರಿತಂತೆ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ನೇತೃತ್ವದಲ್ಲಿ ಈ ವರ್ಷ ಮೂರನೇ ವರ್ಷದ ನವರಾತ್ರಿ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಶ್ರೀದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿ ನಿರಂತರ ಒಂಬತ್ತು ದಿನಗಳವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಾಧಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿದಿನವು ದಾಂಡಿಯಾ ಕೋಲಾಟದ ಜೊತೆ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಈ ಬಾರಿ ರಾತ್ರಿ 11 ಗಂಟೆಯೊಳಗೆ ದಾಂಡಿಯಾವನ್ನು ಕೊನೆಗೊಳಿಸಲಾಗುತ್ತದೆ. ಸ್ಥಳೀಯ ಸಾರ್ವಜನಿಕರಿಗೆ ಯವುದೇ ರೀತಿಯ ತೊಂದರೆಯಾಗದಂತೆ ಸಂಭ್ರಮ, ಸಡಗರ ಹಾಗೂ ಅತ್ಯಂತ ಶ್ರದ್ಧಾಭಕ್ತಿಯಿಂದ ನವರಾತ್ರಿ ಉತ್ಸವವನ್ನು ಆಯೋಜಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.
ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಟಿ.ಎಸ್.ಬಾಲಮಣಿಯವರು ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ಮಹತ್ವದ ಸಂಕಲ್ಪದಡಿ ಈ ಕಾರ್ಯಕ್ರಮವನ್ನು ಸರ್ವರ ಸಹಕಾರದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಇದು ಸಮಸ್ತ ದಾಂಡೇಲಿಗರ ಸಂಭ್ರಮದ ಕಾರ‍್ಯಕ್ರಮವಾಗಬೇಕೆನ್ನುವ ನಿಟ್ಟಿನಲ್ಲಿ ಕಾರ‍್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ಸಮಿತಿಯ ಪ್ರಧಾನ ಕಾರ‍್ಯದರ್ಶಿ ನರೇಂದ್ರ ಚೌವ್ಹಾಣ್ ಅವರು ಶ್ರೀ ದುರ್ಗಾಮಾತೆಯ ಪ್ರತಿಷ್ಟಾಪನೆಯ ಸಂದರ್ಭದಲ್ಲೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ದುರ್ಗಾಮಾತೆಯ ಮಹತ್ವ ಮತ್ತು ಶಕ್ತಿಯನ್ನು ಸಾರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರುಗಳಾದ ಬುದವಂತಗೌಡ ಪಾಟೀಲ್, ಗುರು ಮಠಪತಿ, ರೋಶನ್ ನೇತ್ರಾವಳಿ, ಸುಧಾಕರ ಶೆಟ್ಟಿ, ರವಿ ಗಾಂವಕರ, ಮಿಥುನ್ ನಾಯಕ, ರವಿಕುಮಾರ್.ಜಿ.ನಾಯಕ, ಮುಸ್ತಾಕ ಶೇಖ, ಪ್ರಶಾಂತ ಬೂರ್ತೆಕರ, ವಿನೋದ ಬಾಂದೇಕರ, ಮುರಳಿ ನಾಯ್ಕ, ರೂಪೇಶ್ ಪವಾರ್, ಗೀತಾ ಶಿಕಾರಿಪುರ, ಅಶ್ವಿನಿ ಬಾಲಮಣಿ, ರಮಾ ರವೀಂದ್ರ, ಪದ್ಮಜಾ ಪ್ರವೀಣ್ ಜನ್ನು, ಅನ್ನಪೂರ್ಣ ಬಾಗಲಕೋಟೆ, ಪದ್ಮಾ ಕುರ್ಡೇಕರ ಮೊದಲಾದವರು ಉಪಸ್ಥಿತರಿದ್ದರು.