ಯಶಸ್ವಿಯಾದ ಬೃಹತ್ ಉಚಿತ ಆರೋಗ್ಯ ಶಿಬಿರ; 744 ಜನರ ತಪಾಸಣೆ
ಶಿರಸಿ: ವೈದ್ಯಕೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವ ಮಟ್ಟದ ಸಾಧನೆ ಆಗಿದ್ದರೂ ಸಹ ಶೇ. 60ಕ್ಕಿಂತ ಹೆಚ್ಚು ಜನರಿಗೆ ಇಂದಿಗೂ ಪೂರ್ಣ ಪ್ರಮಾಣದ ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಪ್ರತಿಷ್ಠಿತ ಸ್ಕೊಡ್‌ವೆಸ್ ಸಂಸ್ಥೆ, ಗುಜರಾತ್‌ನ ದೇಸಾಯಿ ಫೌಂಡೇಶನ್ ಟ್ರಸ್ಟ್, ರೋಟರಿ ಕ್ಲಬ್ ಶಿರಸಿ, ಭಾರತೀಯ ವೈದ್ಯಕೀಯ ಸಂಸ್ಥೆ ಶಿರಸಿ, ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೆ.24ರಂದು ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರಕಾರ ವೈದ್ಯಕೀಯ ಮಹಾವಿದ್ಯಾಲಯಗಳ ಸ್ಥಾಪನೆಗೆ ಇರುವ ನಿಯಮಗಳನ್ನು ಸಡಿಲಿಸಿ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರನ್ನು ರೂಪಿಸುವ ಮೂಲಕ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಪೂರ್ಣ ಪ್ರಮಾಣದ ವೈದ್ಯರು ಲಭ್ಯವಾಗುವಂತೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸುತ್ತಾ ಇಂತಹ ಬೃಹತ್ ಆರೋಗ್ಯ ಶಿಬಿರಗಳು ಆಕಸ್ಮಿಕವಾಗಿ ಎದುರಿಸಬೇಕಾದ ಮಾರಣಾಂತಿಕ ಖಾಯಿಲೆಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಶಿರಸಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ್ ಗೌಡ, ನಗರ ಸಭೆ ಅಧ್ಯಕ್ಷರಾದ ಶರ್ಮಿಳಾ ಮಾದನಗೇರಿ, ಕೆನರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮುರಾರಿ ಮೋಹನ್, ಸ್ಕೊಡ್‌ವೆಸ್ ಸಂಸ್ಥೆಯ ನಿರ್ದೇಶಕ ಕೆ.ಎನ್. ಹೊಸಮನಿ, ಎಸ್.ಬಿ.ಐ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪಿ.ಯು. ಪರಿ ಸಂದರ್ಭೋಚಿತವಾಗಿ ಮಾತನಾಡಿದರು.
ಶಿಬಿರದಲ್ಲಿ ಸುಮಾರು ಹದಿನೈದಕ್ಕಿಂತ ಹೆಚ್ಚು ವಿವಿಧ ತಜ್ಞ ವೈದ್ಯರು ಭಾಗವಹಿಸಿದ್ದು ಸ್ತ್ರೀ ರೋಗ ತಪಾಸಣೆ, ಸಾಮಾನ್ಯ ವೈದ್ಯಕೀಯ ತಪಾಸಣೆ, ನೇತ್ರ ತಪಾಸಣೆ, ನರರೋಗ ತಪಾಸಣೆ, ಹೃದಯ ರೋಗ ಸಂಬಂಧಿತ ತಪಾಸಣೆ ಹಾಗೂ ಇಸಿಜಿ ಪರೀಕ್ಷೆ, ಚರ್ಮರೋಗ ತಪಾಸಣೆ, ಮಕ್ಕಳ ತಪಾಸಣೆ, ಉದರ ರೋಗ ತಪಾಸಣೆ, ಕ್ಯಾನ್ಸರ್ ರೋಗ ಸಂಬಂಧಿತ ತಪಾಸಣೆ(ಆಂಕೋಲಾಜಿ), ಮೂತ್ರ ರೋಗ ಸಂಬಂಧಿತ ತಪಾಸಣೆ, ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ, ಮನೋರೋಗ ತಪಾಸಣೆ ಮಾಡಲಾಯಿತು. ಶಿರಸಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸುಮಾರು 744 ಜನರು ಶಿಬಿರದ ಪ್ರಯೋಜನ ಪಡೆದರು.
ಆರಂಭದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ರೋಟರಿ ಕ್ಲಬ್ ಅಧ್ಯಕ್ಷೆ ಡಾ. ಸುಮನ್ ಹೆಗಡೆ ವಂದಿಸಿದರು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಮಧುಕೇಶ್ವರ ಜಿ.ವಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಬೃಹತ್ ಉಚಿತ ವೈದ್ಯಕೀಯ ಶಿಬಿರದ ಯಶಸ್ವಿಗೆ ಸ್ಕೊಡ್‌ವೆಸ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ರೋಟರಿ ಕ್ಲಬ್‌ನ ಎಲ್ಲಾ ಸದಸ್ಯರು ಅವಿರಥವಾಗಿ ಶ್ರಮಿಸಿದರು. ಶಿರಸಿ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳು ಖುದ್ದಾಗಿ ಭಾಗವಹಿಸಿ ಉಚಿತವಾಗಿ ಔಷಧಿ ವಿತರಿಸಿದರು.