Slide
Slide
Slide
previous arrow
next arrow

ಯಶಸ್ವಿಯಾಗಿ ಸಂಪನ್ನಗೊಂಡ ರಸಾಯನಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

300x250 AD

ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜು ಹಾಗೂ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕಾರವಾರ(ಉ.ಕ.), ಉತ್ತರ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ರಸಾಯನಶಾಸ್ತ್ರ ಪುನಶ್ಚೇತನ ಕಾರ್ಯಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚಿಗೆ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.

ಕೊಂಕಣ ಎಜುಕೇಶನ್ ಟ್ರಸ್ಟ್ ನ ಹಿರಿಯ ವಿಶ್ವಸ್ಥರಾದ ಡಿ. ಡಿ. ಕಾಮತ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ “ಕಾರ್ಯಾಗಾರದ ಸದುಪಯೋಗವನ್ನು ಜಿಲ್ಲೆಯ ವಿವಿಧ ತಾಲ್ಲೂಕಿನ ಬೇರೆಬೇರೆ ಕಾಲೇಜಿನಿಂದ ಆಗಮಿಸಿದ ಎಲ್ಲಾ ಉಪನ್ಯಾಸಕರು ಪಡೆದುಕೊಂಡು, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ನೀಡಿ ಮಕ್ಕಳು ಪ್ರಶ್ನೆ ಕೇಳಿ ವಿಷಯವನ್ನು ಅರ್ಥೈಸುವಂತೆ ಮಾಡಿ” ಎಂದು ಕಿವಿಮಾತನ್ನು ಹೇಳಿದರು. ತಮ್ಮ ವಿದ್ಯಾರ್ಥಿ ಜೀವನ, ರಸಾಯನಶಾಸ್ತ್ರದಲ್ಲಿ ಉನ್ನತ ಶಿಕ್ಷಣ ವನ್ನು ಪಡೆದುಕೊಂಡ ಹಾಗೂ ಉದ್ಯೋಗದ ಅನುಭವವನ್ನು ಮೆಲುಕು ಹಾಕಿದರು. ಇದೇ ಸಮಯದಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆಯ ಮುಂದಿನ ಕಾರ್ಯಚಟುವಟಿಕೆಗಳಿಗೆ ತಮ್ಮ ಸಂಸ್ಥೆಯ ಸಹಕಾರ ಯಾವತ್ತೂ ಇರುತ್ತದೆ ಎಂಬ ಭರವಸೆಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರ ಸಂಘದ ಅಧ್ಯಕ್ಷರು, ಹಾಗೆಯೇ ಹ. ಬೆ. ಸರಕಾರಿ ಪದವಿಪೂರ್ವ ಕಾಲೇಜು, ಕುಮಟಾದ ಪ್ರಾಚಾರ್ಯರು, ರಸಾಯನಶಾಸ್ತ್ರ ವೇದಿಕೆಯ ನಿಕಟಪೂರ್ವ ಅಧ್ಯಕ್ಷರು ಆಗಿರುವ ಸತೀಶ ನಾಯ್ಕ ಮಾತನಾಡಿ, “ರಸಾಯನಶಾಸ್ತ್ರ ವೇದಿಕೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲ ಉಪನ್ಯಾಸಕರ ವೇದಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಹ ಪ್ರಯೋಗಾಲಯದ ಕೈಪಿಡಿ ತಯಾರಿಸಿ ವಿತರಣೆ ಮಾಡುವುದು ಇರಬಹುದು, ಪ್ರಶ್ನೆ ಕೋಶ ತಯಾರಿ ಮಾಡಿ ಕೊಡುವುದು ಇರಬಹುದು, ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರುಗಳಿಗೆ ಪ್ರೊತ್ಸಾಹ ನೀಡುವ ದೃಷ್ಟಿಯಿಂದ ದ್ವಿತೀಯ ಪಿಯುಸಿಯ ರಸಾಯನಶಾಸ್ತ್ರದಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಇರಬಹುದು, ಇವೆಲ್ಲವನ್ನೂ ವೇದಿಕೆ ಕಳೆದ 20 ವರ್ಷಗಳಿಂದ ಮಾಡಿಕೊಂಡು ಬಂದಿದೆ” ಎಂದು ತಿಳಿಸಿದರು. ಎಲ್ಲಾ ಉಪನ್ಯಾಸಕರು ಹೊಸ ಮಾದರಿಯ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದ ಸಂದೇಹಗಳನ್ನು ಹಿರಿಯ ವಿಷಯ ತಜ್ಞರುಗಳಿಂದ ಪಡೆದುಕೊಂಡು ನಮ್ಮ ಜಿಲ್ಲೆಯ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಸಾಲಿನಲ್ಲಿ 100 ಕ್ಕೆ 100 ಅಂಕ ಪಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷರು, ಸರಕಾರಿ ಪದವಿಪೂರ್ವ ಕಾಲೇಜು, ಮಳಗಿಯ ಪ್ರಾಚಾರ್ಯರಾದ ಗಣೇಶ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿ ವೇದಿಕೆ ಸಾಗಿಬಂದ ರೀತಿಯನ್ನು, ಹಾಗೂ ಮುಂದಿನ ಕಾರ್ಯಯೋಜನೆ ಬಗ್ಗೆ ತಿಳಿಸಿ ಎಲ್ಲರನ್ನೂ ಸ್ವಾಗತಿಸಿದರು.

300x250 AD

2023-24 ನೇ ಸಾಲಿನ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದ ಜಿಲ್ಲೆಯ ವಿವಿಧ ಕಾಲೇಜಿನ ಒಟ್ಟು 27 ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರ ವೇದಿಕೆ ವತಿಯಿಂದ ನಗದು ಸಹಿತ ಪ್ರಶಸ್ತಿ ಪತ್ರ ವಿತರಿಸಿ ಪುರಸ್ಕರಿಸಲಾಯಿತು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವೇದಿಕೆಯ ಖಜಾಂಚಿ ಸತೀಶ ಬೀರಕೋಡಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಹಿರಿಯ ವಿಶ್ವಸ್ಥರಾದ ಡಿ. ಡಿ. ಕಾಮತ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಕಿರಣ ಭಟ್ಟ ಇವರನ್ನು ರಸಾಯನಶಾಸ್ತ್ರ ವೇದಿಕೆ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ರಸಾಯನಶಾಸ್ತ್ರ ವೇದಿಕೆಯ ಉಪಾಧ್ಯಕ್ಷರುಗಳಾದ ಜೆ. ಪಿ. ನಾಯ್ಕ ಹಾಗೂ ಶ್ರೀಮತಿ ಶೋಭಾ ದೀಕ್ಷಿತ್ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವೇದಿಕೆಯ ಕಾರ್ಯದರ್ಶಿ ಆರ್. ಟಿ. ನಾಯ್ಕ ವಂದಿಸಿದರು. ಉಪನ್ಯಾಸಕರಾದ ಪ್ರಸನ್ನ ಹೆಗಡೆ ಕಾರ್ಯಕ್ರಮ ಸಂಯೋಜಿಸಿದರು. ಉಪನ್ಯಾಸಕಿ ಶ್ರೀಮತಿ. ದೀಕ್ಷಿತಾ ಕುಮಟಾಕರ ಹಾಗೂ ಉಪನ್ಯಾಸಕಿ ಶ್ರೀಮತಿ. ನಿಶಾ ಬ್ರಿಟೋ ಕಾರ್ಯಕ್ರಮ ನಿರೂಪಿಸಿದರು,ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸಿಕೊಟ್ಟರು, ಕಾಲೇಜಿನ ಸಿಬ್ಬಂದಿ ವರ್ಗದವರು ಸಹಕರಿಸಿದರು.

Share This
300x250 AD
300x250 AD
300x250 AD
Back to top