ದಾಂಡೇಲಿ : ಸ್ವಚ್ಛತೆಯಿದ್ದಲ್ಲಿ ಆರೋಗ್ಯ. ಒಂದು ಊರಿನ ಪ್ರಗತಿಯಲ್ಲಿ ಆ ಊರಿನ ಸ್ವಚ್ಛತೆ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ಬಹು ಮುಖ್ಯವಾಗಿ ಪ್ರವಾಸಿ ನಗರವಾಗಿ ಗುರುತಿಸಿಕೊಂಡಿರುವ ದಾಂಡೇಲಿ ನಗರದ ಸ್ವಚ್ಛತೆಗೆ ನಗರದ ಸಾರ್ವಜನಿಕರು ನಗರಸಭೆಯ ಜೊತೆ ಸದಾ ಕೈ ಜೋಡಿಸಬೇಕೆಂದು ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ್ ಕರೆ ನೀಡಿದರು.
ಅವರು ಶನಿವಾರ ನಗರದ 14ನೇ ಬ್ಲಾಕ್ ಪ್ರದೇಶದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸ್ವಚ್ಛತೆ ಒಂದು ದಿನದ ಕಾರ್ಯವಲ್ಲ. ಅದು ನಿರಂತರವಾದ ಪ್ರಕ್ರಿಯೆ. ಸ್ವಚ್ಛತಾ ಕಾರ್ಯ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮುಖ್ಯವಾಗಿಟ್ಟುಕೊಳ್ಳಬೇಕು. ನಗರಸಭೆಯ ಜೊತೆ ನಗರದ ಸಾರ್ವಜನಿಕರು ಸ್ವಚ್ಛತೆಗೆ ಕೈಜೋಡಿಸಿದಾಗ ಮಾತ್ರ ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣವಾಗಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಸರಸ್ವತಿ ರಜಪೂತ, ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.