ಗಲಭೆ ಘಟನೆಗಳ ಎನ್ಐಎ ತನಿಖೆಗೆ ವಿಜಯೇಂದ್ರ ಆಗ್ರಹ
ಬೆಂಗಳೂರು: ದೇಶದ್ರೋಹಿಗಳ ವಿರುದ್ಧ ರಾಜ್ಯ ಕಾಂಗ್ರೆಸ್ ಸರಕಾರದ ಮೃದು ಧೋರಣೆಯಿಂದ ಶಾಂತಿ- ಸುವ್ಯವಸ್ಥೆ ಕದಡುವ ಕೆಲಸ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ, ದಾವಣಗೆರೆ ಮತ್ತಿತರ ಕಡೆ ನಡೆದ ಗಲಭೆಗಳ ಕುರಿತು ನಿಮ್ಮ ನೇತೃತ್ವದಲ್ಲಿ ಸಮರ್ಪಕ ತನಿಖೆ ನಡೆಯಲು ಸಾಧ್ಯವಿಲ್ಲ. ಈ ಘಟನೆಗಳ ಬಗ್ಗೆ ಎನ್ಐಎ ಯಿಂದ ತನಿಖೆ ಆಗಬೇಕೆಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಬದಿಗಿಡಿ. ಎಲ್ಲ ಸಮಾಜದ ಜನರು ನೆಮ್ಮದಿಯಿಂದ ಬದುಕುವಂತಾಗಲು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಬದಿಗಿಟ್ಟು, ಎಲ್ಲ ಘಟನೆಗಳ ತನಿಖೆಯನ್ನು ಎನ್ಐಎಗೆ ಕೊಡಿ ಎಂದು ಒತ್ತಾಯಿಸಿದರು.
ಹಿಂದೂಗಳ ಮೇಲೆ ಬಲಾತ್ಕಾರ ಆಗುತ್ತಿದೆ. ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಪೊಲೀಸರ ಕಣ್ಮುಂದೆ ಇದೆಲ್ಲ ನಡೆದರೂ ಅವರು ಕಣ್ಮುಚ್ಚಿ ಕೂತಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಇದ್ದಾರೆ. ಇದೇ ಕಾರಣಕ್ಕೆ ಅಲ್ಪಸಂಖ್ಯಾತರು ರಾಜ್ಯದಲ್ಲಿ ಮೆರೆಯುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿಪಕ್ಷವಾದ ಬಿಜೆಪಿ ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕೆಂದು ಚರ್ಚಿಸಲಿದ್ದೇವೆ ಎಂದ ಅವರು, ರಾಜ್ಯದ ಅರಾಜಕತೆ ದಿನೇದಿನೇ ಹೆಚ್ಚಾಗಿದೆ. ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಂದಾದ ಮೇಲೆ ಒಂದರಂತೆ ದುರ್ಘಟನೆಗಳು ನಡೆಯುತ್ತಿವೆ. ನಾಗಮಂಗಲದಲ್ಲಿ ಆದ ದುರ್ಘಟನೆಯ ಬಳಿಕ ಪಾಂಡವಪುರದಲ್ಲಿ ಪೊಲೀಸರು ಏಕಾಏಕಿ ಸಂಘದ ಕಾರ್ಯಾಲಯಕ್ಕೆ ನುಗ್ಗಿ ದಬ್ಬಾಳಿಕೆ ಮಾಡಿದ್ದಾರೆ. ನಿನ್ನೆ ರಾತ್ರಿ ದಾವಣಗೆರೆಯಲ್ಲಿ ಘಟನೆ ನಡೆದಿದೆ. ಹಿಂದೂ ಯುವಕರು ಶಾಂತಿಯುತವಾಗಿ ಗಣಪತಿ ಮೆರವಣಿಗೆ ಮಾಡುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲಾಗಿದೆ ಎಂದು ಟೀಕಿಸಿದರು. ಪೊಲೀಸ್ ಅಧಿಕಾರಿಗಳಿಗೂ ಕಲ್ಲಿನ ಪೆಟ್ಟು ಬಿದ್ದಿದೆ ಎಂದರು.
ದಾವಣಗೆರೆ, ನಾಗಮಂಗಲ ಸೇರಿ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಘಟನಾವಳಿಗಳನ್ನು ಗಮನಿಸಿದರೆ ಈ ರಾಜ್ಯದಲ್ಲಿ ಚುನಾಯಿತ ಸರಕಾರ ಇದೆ; ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಇದೆ ಎಂಬುದೇ ಮರೆತುಹೋಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಇದೆ; ಪರಮೇಶ್ವರ್ ಅಂಥವರು ಗೃಹ ಸಚಿವರಾಗಿದ್ದಾರೆ. ಹಿಂದೂಗಳ ಮೇಲೆ ದಾಳಿ ಏನೇ ಆದರೂ ಅದನ್ನು ಸಣ್ಣ ಘಟನೆ ಎಂದು ರಾಜ್ಯ ಸರಕಾರ ಕೈಕಟ್ಟಿಕೊಂಡು ಕೂರುತ್ತದೆ ಎಂಬ ಧೈರ್ಯ- ವಿಶ್ವಾಸ ದೇಶದ್ರೋಹಿಗಳಲ್ಲಿದೆ ಎಂದು ವಿಶ್ಲೇಷಿಸಿದರು.
ಈಚೆಗೆ ನಾಗಮಂಗಲದಲ್ಲಿ ಹಿಂದೂ ಯುವಕರು ಗಣೇಶನ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಏಕಾಏಕಿ ಕತ್ತಿ, ತಳವಾರು ತೆಗೆದುಕೊಂಡು ಆ ಮೆರವಣಿಗೆ ಮೇಲೆ ದಾಳಿ ಮಾಡಿದ ಒಂದು ಕೋಮಿನ ಜನರು, ದೇಶದ್ರೋಹಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಹಿಂದೂಗಳ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡಿ, ಬಾಗಿಲು ಹಾಕಿದ್ದ ಅಂಗಡಿಗಳ ಬಾಗಿಲನ್ನು ಹಾರೆ ಉಪಯೋಗಿಸಿ ತೆಗೆದು ಬೆಂಕಿ ಹಚ್ಚಿ ಆಸ್ತಿಪಾಸ್ತಿ ನಷ್ಟ ಮಾಡಿದ್ದಾರೆ ಎಂದು ಆರೋಪಿಸಿದರು. ಪೊಲೀಸರ ಕಣ್ಮುಂದೆ ನಾಗಮಂಗಲದ ಈ ದುರ್ಘಟನೆ ನಡೆದಿದೆ ಎಂದು ಆಕ್ಷೇಪಿಸಿದರು.
ಘಟನೆಯ ಮಾರನೇ ದಿನ ನಾನು, ನಮ್ಮ ವಿಪಕ್ಷದ ನಾಯಕರು, ಪಕ್ಷದ ಮುಖಂಡರು ನಾಗಮಂಗಲಕ್ಕೆ ಭೇಟಿ ನೀಡಿದ್ದೇವೆ. ಪ್ರತ್ಯಕ್ಷವಾಗಿ ಎಲ್ಲರನ್ನೂ ಮಾತನಾಡಿಸಿದ್ದೇವೆ. ಬಿಜೆಪಿ ಸತ್ಯಶೋಧನಾ ಸಮಿತಿಯನ್ನು ನಂತರ ರಚಿಸಿದ್ದು, ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರ ನೇತೃತ್ವದಲ್ಲಿ ಕಳುಹಿಸಿ ಕೊಟ್ಟಿದ್ದೆವು. ಎಲ್ಲರನ್ನೂ ಭೇಟಿ ಮಾಡಿ ಸತ್ಯಾಸತ್ಯತೆ ಅರ್ಥ ಮಾಡಿಕೊಂಡು ದುರ್ಘಟನೆ ಕುರಿತು ಮಾಹಿತಿ ಪಡೆದಿದೆ. ಇದರ ಹಿಂದಿನ ವ್ಯವಸ್ಥಿತ ಪಿತೂರಿಯನ್ನು ತಿಳಿದುಕೊಂಡಿದ್ದಾರೆ. ವರದಿಯನ್ನು ನನಗೆ ಇವತ್ತು ಹಸ್ತಾಂತರ ಮಾಡಿದ್ದಾರೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ, ರಾಜ್ಯ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ಅಶ್ವಿನ್ ಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಪಕ್ಷದ ಮುಖಂಡ ಭಾಸ್ಕರ್ ರಾವ್, ಮಂಡ್ಯ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.