ಶಿರಸಿ: ಶಿರಸಿ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಅಸೋಸಿಯೇಶನ್ ವತಿಯಿಂದ ಇತ್ತೀಚೆಗೆ ಟಿ.ಎಂ.ಎಸ್. ಸಭಾಭವನದಲ್ಲಿ ಸರ್.ಎಮ್. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯ ಪ್ರಯುಕ್ತ ಇಂಜಿನೀಯರ್ಸ್ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಮ್ಮಚಗಿ ಸಂಸ್ಕೃತ ವಿದ್ಯಾಲಯದ ಪ್ರಾಧ್ಯಾಪಕ ವಿದ್ವಾನ್ ಡಾ. ನಾಗೇಶ ಭಟ್ಟ ಕೆ.ಸಿ.ವರು ಇಂಜಿನೀಯರುಗಳು ವೃತ್ತಿ, ಪ್ರವೃತ್ತಿ ಮತ್ತು ಪ್ರಕೃತಿಯನ್ನು ಸಮನಾಗಿ ಬೆಸೆದು ತಮ್ಮ ವೃತ್ತಿಗೆ ನ್ಯಾಯ ಒದಗಿಸಬೇಕೆಂದು ಹೇಳಿದರು. ಅದರ ಜೊತೆ ನಿರ್ಮಾಣದಲ್ಲಿ ವಾಸ್ತುಶಾಸ್ತ್ರದ ಮಹತ್ವವನ್ನು ಅಧ್ಯಯನ ಮಾಡಿ ತಿಳಿದೊಕೊಳ್ಳಲು ವಿನಂತಿಸಿದರು. ಪುರಾತನ ತತ್ವ ಮತ್ತು ಈಗಿನ ವಿಜ್ಞಾನ ಸೇರಿಸಿ ಹಳೆಯ-ಹೊಸತರ ಸಮನ್ವಯದಿಂದ ಅಭಿವೃದ್ದಿ ಸಾಧಿಸಲು ಸಾಧ್ಯ ಎಂದರು. ಮುಖ್ಯ ಅಥಿತಿ ಸ್ಥಾನದಿಂದ ಪ್ರೋಪೆಸರ್ ಕೆ.ಎನ್. ಹೊಸಮನಿ ಮಾತನಾಡಿ ಇಂಜಿನೀಯರಿಂಗ್ ವೃತ್ತಿಯಲ್ಲಿರುವವರು ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜಕ್ಕೆ ಕೊಡುಗೆ ನೀಡುವ ಜೊತೆ ಸರ್.ಎಂ.ವಿ. ಅವರ ಆದರ್ಶ ಪಾಲಿಸಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕನ್ಸಲ್ಟಿಂಗ್ ವೃತ್ತಿ ಮಾಡುತ್ತಾ ಪಿ.ಎಚ್.ಡಿ. ಪದವಿ ಪಡೆದು ಸಾಧನೆ ಮಾಡಿದ ಡಾ. ಮನು ಪಿ. ಹೆಗಡೆ ದಂಪತಿಗಳನ್ನು ಸನ್ಮಾನಿಸಲಾಯಿತು. ಅಸೋಶಿಯೇಶನ್ ವತಿಯಿಂದ ಇತ್ತಿಚೆಗೆ ನಡೆಸಿದ ಪ್ರಬಂಧ ಸ್ಪರ್ದೆ ವಿಜೇತರಿಗೆ ಬಹುಮಾನ ನೀಡಲಾಯಿತು ಅಲ್ಲದೇ, ಆರ್.ಎನ್.ಎಸ್. ಪೋಲಿಟೆಕ್ನಿಕ್ನಲ್ಲಿ ಅಂತಿಮ ಪರೀಕ್ಷೆಯ ನಾಲ್ಕು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಇಂಜಿನೀಯರ್ ಎಂ.ಆರ್. ಹೆಗಡೆ, ಮನು ಪಿ. ಹೆಗಡೆ, ಚಂದ್ರಶೇಖರ ಕೆ.ಎ., ಗಣೇಶ ಉಪಾಧ್ಯಾ ಮತ್ತು ಇಂಜಿನೀಯರ್ ಅನಿಲ್ ಮತ್ತು ಭಾಗಿರಥಿ ಕರಿ ನೀಡಿರುವ ದತ್ತಿನಿಧಿಯನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಇಂಜಿನೀಯರಾಗಿ ಸೇವೆ ಸಲ್ಲಿಸಿದ ವಿನಾಯಕ ಶೇಟ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷ ಇಂಜಿನೀಯರ ಶ್ಯಾಮಸುಂದರ ಎಂ. ಭಟ್ಟ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಇಂ. ಎಲ್.ಆರ್. ಹೆಗಡೆಯವರು ಸಂಘ ನಡೆದು ಬಂದ ದಾರಿಯನ್ನು ವಿಸ್ತೃತವಾಗಿ ವಿವರಿಸಿದರು. ಉಪಾಧ್ಯಕ್ಷರಾದ ಇಂ. ವಿನಾಯಕ ಗಾಂಕರರವರು ಎಲ್ಲರನ್ನೂ ಅಭಿನಂದಿಸಿದರು. ಇಂ. ವಿ.ಎಂ.ಭಟ್ಟ, ಸುಹಾಸ ಹೆಗಡೆ, ಗಿರೀಶ ಹೆಗಡೆ, ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಹಿರಿ-ಕಿರಿಯ ಇಂಜಿನೀಯರುಗಳು, ಸಂಘ ಸಂಸ್ಥೆಗಳ ಪಧಾಧಿಕಾರಿಗಳು, ಕಟ್ಟಡ ಸಾಮಾಗ್ರಿ ವಿತರಕರು, ಸ್ಟೀಲ್ ಸಿಮೆಂಟ್ ಕಂಪನಿಯ ಅಧಿಕಾರಿಗಳು ಮತ್ತು ಸಮಾಜದ ಗಣ್ಯರು ಭಾಗವಹಿಸಿದ್ದರು.