ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಶಾಖಾಮಠದ ಪೂಜ್ಯರಾದ ಸದ್ಗರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ, ಬಿಜಿಎಸ್ ಸೆಂಟ್ರಲ್ ಸ್ಕೂಲ್, ಆದಿಚುಂಚನಗಿರಿ ಇಂಡಿಪೆಂಡೆಂಟ್ ಪದವಿ ಪೂರ್ವ ಕಾಲೇಜು ಮಿರ್ಜಾನ್ ,ಕುಮಟಾ,ಲಯನ್ಸ್ ಕ್ಲಬ್, ಕುಮಟಾರವರ ಸಂಯುಕ್ತ ಆಶ್ರಯದಲ್ಲಿ ಹಿಂದಿ ದಿವಸವನ್ನು ಸೆ.14ರಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಎಂಟನೇ ತರಗತಿಯ ವಿದ್ಯಾರ್ಥಿನಿ ಪೃಥ್ವಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದಳು. ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ವಿಷ್ಣುಪಟಗಾರ ಕಾರ್ಯಕ್ರಮದ ಅತಿಥಿ ಮಹೋದಯರನ್ನು ಪರಿಚಯಿಸಿದರು.ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ರಾಮಚಂದ್ರ ಭಟ್ ಹಿಂದಿ ಭಾಷೆಯ ಮಹತ್ವವನ್ನು ತಿಳಿಸಿದರು. ಲಯನ್ಸ್ ಕ್ಲಬ್ ಖಜಾಂಚಿಯವರಾದ ಎಂ.ಎನ್.ಹೆಗಡೆ ಹಿಂದಿ ಭಾಷೆ ರಾಷ್ಟ್ರೀಯ ಭಾಷೆಯಾಗಬೇಕು ಎಂದು ತಮ್ಮ ಮನದಾಳದ ಇಚ್ಛೆಯನ್ನು ಸಭೆಯ ಮುಂದಿಟ್ಟರು. ಲಯನ್ಸ್ ಕ್ಲಬ್ ಸದಸ್ಯರಾದ ಯೋಗಾನಂದ ಗಾಂಧಿ ತಮ್ಮ ವಾಕ್ ಚಾತುರ್ಯದಿಂದ ಎಲ್ಲಾ ಭಾಷೆಯನ್ನು ಪ್ರೀತಿಸಿರಿ ಮಾತೃ ಭಾಷೆಯನ್ನು ಮರೆಯದಿರಿ. ಹಿಂದುಸ್ಥಾನದ ಹಿಂದಿ ಭಾಷೆಯನ್ನು ಗೌರವಿಸಿ ಎಂದು ಮಕ್ಕಳಿಗೆ ತಿಳಿಸಿದರು. ಬಿಜಿಎಸ್ ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್ಟ ಹಿಂದಿ ಭಾಷೆಯ ಸಾಹಿತ್ಯದ ಬಗ್ಗೆ ತಿಳಿಸಿದರೆ , ಶಾಲೆಯ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸೌಭಾಗ್ಯ ಬಾಳೇರಿಯವರು ಹಿಂದಿ ಭಾಷೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಹಿರಿಯ ಶಿಕ್ಷಕರಾದ ಎಂ.ಜಿ. ಹಿರೇಕುಡಿ ಉಪನ್ಯಾಸ ಸಾಮ್ರಾಟ ಪ್ರೇಮ ಚಂದರವರ ಕಥೆಯನ್ನು ಹೇಳಿದರೆ, ಶಾಲೆಯ ಆಡಳಿತಾಧಿಕಾರಿಗಳಾದ ಜಿ.ಮಂಜುನಾಥ್ ತಮ್ಮ ಮಧುರ ಕಂಠದಿಂದ ಹಿಂದಿ ಗೀತೆಯನ್ನು ಹಾಡಿದರು. ಸಂಪೂರ್ಣ ಕಾರ್ಯಕ್ರಮವನ್ನು ಪುಟ್ಟ ಪುಟ್ಟ ಮಕ್ಕಳು ನೆರವೇರಿಸಿ ಭಾಷೆಯ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸಿದರು. ಈ ಸುಸಂದರ್ಭದಲ್ಲಿ ಪಾಠಭೋದಿಸುತ್ತಿರುವ ಹಿಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು . ಹಿಂದಿ ಕಾರ್ಯಕ್ರಮದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳನ್ನು ನೆರವೇರಿಸಿ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು. ಹಲವಾರು ವರ್ಷಗಳಿಂದ ವಿಷ್ಣು ಪಟಗಾರ ಈ ಬಹುಮಾನಗಳ ಪ್ರಾಯೋಜಕರಾಗಿದ್ದು ಮಕ್ಕಳಲ್ಲಿ ರಾಜ ಭಾಷೆಯ ಬಗ್ಗೆ ಆಸಕ್ತಿಯನ್ನು ಮೂಡಿಸುತ್ತಿರುವುದು ಶ್ಲಾಘನೀಯ. ಲಿಖಿತಾ ವಂದನಾರ್ಪಣೆ ಮಾಡಿದಳು, ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ರಾಷ್ಟ್ರೀಯ ದಿನವಾದ ಹಿಂದಿ ದಿನವನ್ನು ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮಿರ್ಜಾನಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.