ಸಿದ್ದಾಪುರ: ಕಾಡುಪ್ರಾಣಿಗಳ ಉಪಟಳ ಕಡಿಮೆ ಆಗಬೇಕಾದರೆ ಅರಣ್ಯದಲ್ಲಿ ಕಾಡುಪ್ರಾಣಿಗಳಿಗೆ ಬೇಕಾಗುವ ವಿವಿಧ ಜಾತಿಯ ಹಣ್ಣಿನ, ಸೊಪ್ಪಿನ ಗಿಡಗಳನ್ನು ನಾಟಿ ಮಾಡಬೇಕಾಗಿದೆ. ಇದರಿಂದ ರೈತರು ಬೆಳೆದ ಬೆಳೆಹಾನಿ ಆಗದಂತೆ ತಡೆಗಟ್ಟಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಹೇಳಿದರು.
ತಾಲೂಕಿನ ತರಳಿಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಿದ್ದಾಪುರ,ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಿದ್ದಾಪುರ, ಶೌರ್ಯ ವಿಪ್ಪತ್ತು ನಿರ್ವಹಣಾ ಘಟಕ ಸಿದ್ದಾಪುರ, ಅರಣ್ಯ ಇಲಾಖೆ ಇವುಗಳ ಆಶ್ರಯದಲ್ಲಿ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ ಗಿಡ ನಾಟಿ ಮತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
2024-25ನೇ ಸಾಲಿನಲ್ಲಿ ಡಾ,ವೀರೇಂದ್ರ ಹೆಗ್ಗಡೆಅವರು ರಾಜ್ಯದಾದ್ಯಂತ 10ಲಕ್ಷ ವಿವಿಧ ಜಾತಿಯ ಹಣ್ಣಿನ ಗಿಡಿಗಳನ್ನು ನಾಟಿ ಮಾಡುವ ಗುರಿ ಇಟ್ಟುಕೊಂಡಿದ್ದಾರೆ.ಸಿದ್ದಾಪುರ ತಾಲೂಕಿನ ಹೆಗ್ಗೋಡಮನೆ, ತರಳಿಮಠ ಮತ್ತು ಕಾಳೇನಳ್ಳಿಯ ಹಿರೇಕೈ ಗ್ರಾಮದಲ್ಲಿ ಒಟ್ಟು ಒಂದು ಸಾವಿರ ಗಿಡ ನಾಟಿ ಮತ್ತು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಿಡ ನೆಡುವ ಜವಾಬ್ದಾರಿಯನ್ನು ತಾಲೂಕಿನ ಶೌರ್ಯ ತಂಡದವರು ಮತ್ತು ಒಕ್ಕೂಟದವರು ನಡೆಸಲಿದ್ದಾರೆ. ಗಿಡ ನೆಡುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಗಿಡವನ್ನು ನೆಟ್ಟು, ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವಂತಹ ಜವಾಬ್ದಾರಿ ಆಗಿದೆ ಎಂದು ಹೇಳಿದರು.
ನಿಡಗೋಡ ಉಪವಲಯ ಅರಣ್ಯಾಧಿಕಾರಿ ನರೇಂದ್ರನಾಥ ಕದಂ ಅರಣ್ಯ ಬೆಳೆಸುವುದಕ್ಕೆ ಇಲಾಖೆಯೊಮದಿಗೆ ಸಾರ್ವಜನಿಕರ ಸಹಕಾರವೂ ಅತ್ಯವಶ್ಯ ಎಂದು ಹೇಳಿದರು.
ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ಹುನುಮಕ್ಕ ಭೋವಿ ಅಧ್ಯಕ್ಷತೆವಹಿಸಿದ್ದರು. ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಣಪತಿ ನಾಯ್ಕ, ಒಕ್ಕೂಟದ ಅಧ್ಯಕ್ಷ ವೀರಭದ್ರ ಗೌಡರ್, ತರಳಿಮಠದ ಸದಸ್ಯ ಸತೀಶ ನಾಯ್ಕ, ಊರಿನ ಗಣ್ಯರು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಗಿರೀಶ ಜಿ.ಪಿ ಪ್ರಾಸ್ತಾವಿಕ ಮಾತನಾಡಿದರು. ವಲಯ ಮೇಲ್ವಚಾರಕ ಪ್ರದೀಪ್ ಸ್ವಾಗತಿಸಿದರು, ಕೃಷಿ ಮೇಲ್ವಿಚಾರಕ ಮಹಾದೇವ ಬಿ. ಕಾರ್ಯಕ್ರಮ ನಿರ್ವಹಿಸಿದರು.