ಕಾರವಾರ: ತಮ್ಮ ಆಡಳಿತಾವಧಿಯಲ್ಲಿ ತಾಲೂಕಿನ ಪ್ರಮುಖ ವಲಯಗಳ ಸಮಗ್ರ ಅಭಿವೃದ್ಧಿಗೆ ಗುರಿ ನಿಗದಿಪಡಿಸಿಕೊಂಡಿದ್ದು, ಅವುಗಳನ್ನು ಸಾಕಾರಗೊಳಿಸಲು ಕೈಜೋಡಿಸಿ ಎಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಏಗನಗೌಡರ ಅವರು ಹೇಳಿದರು.
ಇತ್ತೀಚೆಗೆ ಕಾರವಾರ ತಾಲೂಕು ಪಂಚಾಯತಿಯ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯಭಾರ ವಹಿಸಿಕೊಂಡ ಅವರು ಗುರುವಾರ ಮೊದಲ ಬಾರಿಗೆ ತಾಲೂಕು ಪಂಚಾಯತ್ ಸಭಾಭವನದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಾತನಾಡಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಆದ್ಯತಾ ಕಾಮಗಾರಿಗಳಾದ ಶಾಲಾ ಶೌಚಾಲಯ, ಕಾಂಪೌಂಡ್, ಆಟದ ಮೈದಾನ, ಅಡುಗೆ ಕೋಣೆ, ಬೋರವೆಲ್ ರೀಚಾರ್ಜ್ ಪಿಟ್ ಅಂತಹ ಸೌಲಭ್ಯಗಳನ್ನು ತಾಲೂಕಿನ ಎಲ್ಲ ಶಾಲೆಗಳಿಗೆ ತಲುಪಿಸುವುದು. ಶಾಲಾ ಅಭಿವೃದ್ಧಿ ಲಭ್ಯವಿರುವ ಎಲ್ಲ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಶೈಕ್ಷಣಿಕ ವಲಯದ ಪ್ರಗತಿ ಸಾಧಿಸುವುದು. ಗ್ರಾಮಗಳಲ್ಲಿನ ಅರಿವು ಕೇಂದ್ರ, ಅಂಗನವಾಡಿಗಳನ್ನು ಮಾದರಿ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದು. ಆಸ್ಪತ್ರೆಗಳಲ್ಲಿ ಎಲ್ಲ ಭೌತಿಕ ಕಾಮಗಾರಿಗಳು ಪೂರ್ಣಗೊಳಿಸುವುದು ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಪ್ರಸ್ತುತ ಇರುವ ಕೆಲ ಪ್ರಮುಖ ಗುರಿಗಳಾಗಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲರು ಸಹಕರಿಸಬೇಕು ಎಂದರು.
ನಮಗೆಲ್ಲ ಜನರಿಗೆ ಸೇವೆ ನೀಡುವ ಅಪೂರ್ವ ಅವಕಾಶ ದೊರಕಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನು ಶ್ರಮಿಸಬೇಕು. ಯಾವುದೇ ವೈಯಕ್ತಿಕ ಸೌಲಭ್ಯಗಳನ್ನು ಹಸ್ತಾಂತರಿಸುವಲ್ಲಿ ವಿಳಂಬವಾಗಬಾರದು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಬೇಕು. ಸಾರ್ವಜನಿಕರಿಂದ ಏಕಮಾತ್ರ ದೂರು ಬರದಂತೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಗ್ರಾಮ ಪಂಚಾಯತಿಯ 15 ನೇ ಹಣಕಾಸು ಯೋಜನೆಯ 2020-21 ರಿಂದ 2023-24 ರವರೆಗಿನ ಅನುದಾನ ಜಮಾ ಹಾಗೂ ಕಾಮಗಾರಿವಾರು ವೆಚ್ಚ, ಅಂದಾಜು ಪತ್ರಿಕೆ ತಯಾರಿಕೆ, ಬಾಕಿ ಹಾಗೂ ಕಾಮಗಾರಿ ಆದೇಶ ವಿತರಣೆ, ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳ ಗುರಿ, ಸಾಧನೆ ಹಾಗೂ ಕೂಲಿಕಾರರ ಭಾಗವಹಿಸುವಿಕೆ, ಕಾಮಗಾರಿ ಮುಕ್ತಾಯಗೊಳಿಸುವುದು, ಆದ್ಯತಾ ಕಾಮಗಾರಿಗಳು, ಬೂದು ನೀರು ನಿರ್ವಹಣೆ ಸೇರಿದಂತೆ ಇನ್ನಿತರೆ ಪ್ರಮುಖ ಅಂಶಗಳು, ಸ್ವಚ್ಛ ಭಾರತ ಮಿಷನ್ ಪಂಚತಂತ್ರ 2.0 ತಂತ್ರಾಂಶದ ಮೂಲಕ ಗ್ರಾಮ ಪಂಚಾಯತಿಗಳ ಆಸ್ತಿ ತೆರಿಗೆ ವಸೂಲಾತಿ ಪ್ರಗತಿ ಒಳಗೊಂಡಂತೆ ಹಲವು ಪ್ರಮುಖ ವಿಷಯಗಳ ಕುರಿತು ವಿಸ್ತ್ರತವಾಗಿ ಚರ್ಚಿಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್, ಪಂಚಾಯತ ರಾಜ್ ಇಂಜಿನೀಯರಿಂಗ್. ಉಪ-ವಿಭಾಗ ಕಾರವಾರ, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ-ವಿಭಾಗ ಕಾರವಾರ, ಸಹಾಯಕ ನಿರ್ದೇಶಕರು (ಗ್ರಾಉ), ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.