ಕಾರವಾರ: ರಾಜ್ಯ ಸರ್ಕಾರವು ರಾಜ್ಯದಲ್ಲಿನ ಬಡ ಜನತೆಯ ಶ್ರೇಯೋಭಿವೃದ್ದಿಗಾಗಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು, ಆರ್ಥಿಕವಾಗಿ ಮೇಲ್ವರ್ಗದಲ್ಲಿರುವ ಜನರು ಪಡೆಯುತ್ತಿದ್ದಲ್ಲಿ ಅದನ್ನು ಸ್ವಯಂ ಪ್ರೇರಣೆಯಿಂದ ಸರಕಾರಕ್ಕೆ ಹಿಂದಿರುಗಿಸುವ ಮೂಲಕ ಅರ್ಹ ವ್ಯಕ್ತಿಗಳಿಗೆ ಯೋಜನೆಯ ಪ್ರಯೋಜನ ದೊರೆಯುವಂತೆ ಮಾಡಬೇಕು ಎಂದು ರಾಜ್ಯದ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಅವರು ಸೋಮವಾರ, ಕಾರವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿ ಕಚೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬೆಲೆ ಏರಿಕೆಯಿಂದ ಕಂಗೆಟ್ಟಿದ ರಾಜ್ಯದ ಜನತೆಗೆ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಸಬಲೀಕರಣಗೊಳ್ಳಲು ನೆರವಾಗಿದ್ದು, ಅಧಿಕಾರಕ್ಕೆ ಬಂದ 6 ತಿಂಗಳ ಒಳಗೇ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು ಮಾತ್ರವಲ್ಲದೇ ಈಗಾಗಲೇ ಶೇ.90 ಕ್ಕೂ ಹೆಚ್ಚು ಪ್ರಗತಿಯನ್ನು ಸಾಧಿಸಲಾಗಿದೆ. ಆದರೆ ಕೆಲವಡೆಗಳಲ್ಲಿ ಆರ್ಥಿಕ ಬಲಾಡ್ಯರು ಕೂಡಾ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದು, ಅವರು ಈ ಯೋಜನೆಗಳ ಪ್ರಯೋಜನ ಪಡೆಯುವುದನ್ನು ಸ್ವಯಂ ಪ್ರೇರಣೆಯಿಂದ ನಿಲ್ಲಿಸಬೇಕು ಎಂದರು.
ಆರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯದೇ ವಂಚಿತರಾದ ಅರ್ಹ ಜನತೆಯನ್ನು ಗುರುತಿಸಿ, ಅವರಿಗೆ ಯೋಜನೆಗಳ ಸಂಪೂರ್ಣ ಪ್ರಯೋಜನ ದೊರಕಿಸುವುದು ತಾಲೂಕು ಅನುಷ್ಠಾನ ಪ್ರಾಧಿಕಾರದ ಸಮಿತಿಯ ಕರ್ತವ್ಯವಾಗಿದ್ದು, ಈ ಕುರಿತಂತೆ ಸಮಿತಿಯ ಎಲ್ಲಾ ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತು, ಯೋಜನೆಯ ಪ್ರಯೋಜನವು ಅರ್ಹರಿಗೆ ಶೇ.100 ರಷ್ಟು ತಲುಪುವಂತೆ ಕಾರ್ಯನಿರ್ವಹಿಸಬೇಕು ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿಯ ಅಧ್ಯಕ್ಷ ರಾಜೇಂದ್ರ ರಾಣೆ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ವಿವರವಾದ ಪಟ್ಟಿ ಇದ್ದು, ಈ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಬಿಟ್ಟುಹೋಗಿರುವ ಅರ್ಹರನ್ನು ಗುರುತಿಸಿ, ಗ್ರಾಮೀಣ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿ ಅರ್ಹರಿಗೆ ಸೌಲಭ್ಯ ಒದಗಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಇಲ್ಲದವರು ತಮಗೆ ದೊರೆಯುತ್ತಿರುವ ಸೌಲಭ್ಯಗಳನ್ನು ಬಿಟ್ಟುಕೊಡಬೇಕು, ಯೋಜನೆಯ ಪ್ರಯೋಜನ ಬಡ ಜನತೆಗೆ ಮಾತ್ರ ದೊರೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಆನಂದ್‌ಸಾ ಹಬೀಬ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವೀರನಗೌಡ ಪಾಟೀಲ್ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.