ಸಿದ್ದಾಪುರ: ಸಿದ್ದಾಪುರದ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ-ಆಪ್ ಸೊಸೈಟಿಗೆ ಬೆಂಗಳೂರಿನಲ್ಲಿ ಆ.23ರಂದು ಜರುಗಿದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ 23ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2023-24ನೇ ಸಾಲಿನ ಉತ್ತಮ ಸೌಹಾರ್ದ ಸಹಕಾರಿ ಪುರಸ್ಕಾರ ನೀಡಿ ಗೌರವಿಸಿದೆ ಎಂದು ಸೊಸೈಟಿ ಅಧ್ಯಕ್ಷ ಆನಂದ ಈರಾ ನಾಯ್ಕ ಹೇಳಿದರು.
ಪಟ್ಟಣದ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ-ಆಪ್ ಸೊಸೈಟಿಯ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಅವರು ಮಾತನಾಡಿದರು. 2004 ಅಕ್ಟೋಬರ್ 19ರಂದು 500ಸದಸ್ಯರೊಂದಿಗೆ 5ಲಕ್ಷರೂ ಗಳೊಂದಿಗೆ ಪ್ರಾರಂಭಗೊಂಡ ಸೊಸೈಟಿ ಇಂದು 21293 ಸದಸ್ಯರನ್ನು ಹೊಂದಿ 84ಲಕ್ಷಕ್ಕೂ ಹೆಚ್ಚು ಶೇರು ಭಂಡವಾಳ ಹೊಂದಿದೆ. ಸಿದ್ದಾಪುರ, ಶಿರಸಿ, ಭಟ್ಕಳ,ಹೊನ್ನಾವರ, ಸಾಗರ ಮತ್ತು ಕುಮಟಾ ಸೇರಿ ಒಟ್ಟೂ 6 ಶಾಖೆಗಳನ್ನು ಹೊಂದಿದೆ. ಸಹಕಾರಿಯು 2023-24ನೇ ಸಾಲಿನಲ್ಲಿ 54.75ಲಕ್ಷ ರೂಗಳಷ್ಟು ನಿವ್ವಳ ಲಾಭ ಹೊಂದಿ ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ವಿತರಿಸಿದೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ನಿಯಮಕ್ಕೊಳಪಟ್ಟು ಸಕಾಲಿಕ ಸೇವೆ,ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ,ರೋಗಿಗಳ ಚಿಕಿತ್ಸೆಗಾಗಿ,ದೇವಾಲಯ, ಟ್ರಸ್ಟ್ ಸಮಾಜ ಸೇವೆಗಾಗಿ ಧನ ಸಹಾಯ ನೀಡಿದ್ದಲ್ಲದೇ ಕಳೆದ ಬೇಸಿಗೆಯಲ್ಲಿ ಅನಾವೃಷ್ಠಿಯಿಂದಾಗಿ ನೀರಿನ ಕೊರತೆ ಉಂಟಾದಾಗ ಪಟ್ಟಣದ ನಾಗರಿಕರಿಗೆ ಎರಡು ವಾರ ಉಚಿತವಾಗಿ ಕುಡಿಯುವ ನೀರಿನ ಪೂರೈಕೆ ಮಾಡಲಾಗಿದೆ. ಸ್ವಚ್ಛತಾ ಸಪ್ತಾಹ, ಸಹಕಾರಿ ದಿನಾಚರಣೆ, ಸಿದ್ದಾಪುರದ ಮುರುಘರಾಜೇಂದ್ರ ಅಂಧ ಮಕ್ಕಳ ಶಾಲೆಗೆ ವಿವಿಧ ರೀತಿಯಲ್ಲಿ ಸಹಕಾರ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಿರುವುದನ್ನು ಹಾಗೂ ಸೊಟೈಟಿ ಆರಂಭದಿಂದ ಇಂದಿನವರೆಗೂ ಸಾಧನೆಯ ಏರುಗತಿಯಲ್ಲಿಯೇ ಸಾಗಿರುವುದನ್ನು ಗುರುತಿಸಿ ಹಾಗೂ ವಿವಿಧ ಸಮಾಜಮುಖಿ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಡಿರುವುದನ್ನು ಗಮನಿಸಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘ ಉತ್ತಮ ಸೌಹಾರ್ದ ಸಹಕಾರಿ ಪುರಸ್ಕಾರ ನೀಡಿ ಗೌರವಿಸಿದೆ ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕ ವಿನಾಯಕ ಆನಂದ ನಾಯ್ಕ ಮಾತನಾಡಿ ಸಂಸ್ಥೆಯ ಏಳ್ಗೆಯಲ್ಲಿ ಅಧ್ಯಕ್ಷರ ಕೊಡುಗೆ ಅಪಾರ. ಅದರಂತೆ ಆಡಳಿತ ಆಡಳಿತ ಮಂಡಳಿಯ ಸಲಹೆ ಸೂಚನೆ, ಪ್ರಧಾನ ವ್ಯವಸ್ಥಾಪಕ ಶ್ರೀಧರ ಎಂ.ಹೆಗಡೆ, ವಿಭಾಗೀಯ ವ್ಯವಸ್ಥಾಪ ಪ್ರಶಾಂತ ನಾಯ್ಕ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಇಂದು ಸೊಸೈಟಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಪ್ರಧಾನ ವ್ಯವಸ್ಥಾಪಕ ಶ್ರೀಧರ ಎಂ.ಹೆಗಡೆ ಸೊಸೈಟಿಯ ವ್ಯವಹಾರಗಳ ಕುರಿತು ಮಾಹಿತಿ ನೀಡಿದರು.
ಉಪಾಧ್ಯಕ್ಷ ವಿ.ಬಿ.ಶೇಟ್, ನಿರ್ದೇಶಕರಾದ ಪರಮೇಶ್ವರ ನಾಯ್ಕ, ರಾಘವೇಂದ್ರ ಪೈ, ಪ್ರೇಮಾನಂದ ಕಾಮತ್, ಮಹಾಬಲೇಶ್ವರ ಕೆ.ನಾಯ್ಕ, ಹನುಮಂತಪ್ಪ ವಡ್ಡರ್ ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕ ಪ್ರಶಾಂತ ವಿ.ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಸಂಘದ ಸದಸ್ಯರ ಠೇವಣಿಯ ಹಣ ಎಂದರೆ ಅದು ದೇವರ ದುಡ್ಡು ನಾವು ಕಾವಲುಗಾರರು. ಸಾಲಗಾರರು ನಮ್ಮ ಅನ್ನದಾತರು ಎಂಬ ನಂಬಿಕೆ ನನ್ನದು. ಯಾರಿಗೂ ಕಷ್ಟವನ್ನು ನೀಡದೆ, ನಮ್ಮ ಸಹಕಾರಿಯ ಸದಸ್ಯರಾದವರ ಶ್ರೇಯೋಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಸಂಸ್ಥೆಯನ್ನು ಮುನ್ನಡೆಸುತ್ತಾ ಇದ್ದೇನೆ. ಸಹಕಾರ ಮತ್ತು ಮಾನವೀಯ ತಳಹದಿಯ ಮೇಲೆ ಸಂಸ್ಥೆಯನ್ನು ಕಟ್ಟಿದ್ದೇವೆ. ಪ್ರಾಮಾಣಿಕತೆಯಿಂದ ಸಂಸ್ಥೆಯನ್ನು ನಡೆಸುತ್ತಾ ಬಂದಿದ್ದೇವೆ. -ಆನಂದ ಈರಾ ನಾಯ್ಕ ಅಧ್ಯಕ್ಷರು, ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ. ಸಿದ್ದಾಪುರ.