ಅಂಕೋಲಾ: ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀಕೃಷ್ಣೋತ್ಸವ ಸಮಿತಿ ಕಲ್ಲೇಶ್ವರ ವತಿಯಿಂದ ರಾಮನಗುಳಿ-ಕಲ್ಲೇಶ್ವರ ಶಾಶ್ವತ ಸೇತುವೆ ನಿರ್ಮಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕರಿಗೆ ಕಲ್ಲೇಶ್ವರದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದರು.
ಇದಕ್ಕೂ ಪೂರ್ವ ಅಂಗನವಾಡಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ದೀಪಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ವೈದ್ಯ ಒಬ್ಬ ಮಹಿಳಾ ಶಾಸಕಿಯಾಗಿ ಇಡೀ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸೇವೆ ಮತ್ತೆ ಸಿಗುವಂತಾಗಲಿ ಎಂದು ಹೇಳಿದರು.ಮಹಿಳೆಯರು ರೂಪಾಲಿ ನಾಯ್ಕರಿಗೆ ಅರಿಶಿಣ, ಕುಂಕುಮ ಹಚ್ಚಿ ಹೂ, ಸೀರೆ ನೀಡಿ ಗೌರವಿಸಿದರು. ನಾಗರಿಕ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ರೂಪಾಲಿ ನಾಯ್ಕ ಡೋಂಗ್ರಿ ಗ್ರಾ.ಪಂ ನನಗೆ ತಾಯಿ ಮನೆ ಇದ್ದಂತೆ. ನಿಮ್ಮೆಲ್ಲರ ಪ್ರೀತಿ ನನ್ನ ಮನದುಂಬಿ ಬಂದಿದೆ ಎಂದು ಗದ್ಗದಿತರಾದರು. ರಾಮನಗುಳಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ನಮಗೆ ಸಂಪೂರ್ಣ ಬೆಂಬಲ ನೀಡಿದ್ದರು. ಇಂದು ಗುಣಮಟ್ಟದ ಸೇತುವೆ ನಿರ್ಮಾಣ ಪೂರ್ಣಗೊಂಡು ಜನರ ಬಳಕೆಗೆ ನಿಂತಿದೆ. ರಾಮನಗುಳಿಯಲ್ಲಿ 9 ಕೋಟಿ ರೂ. ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೇರಿಸುವ ಕಾರ್ಯ ನಡೆಯುತ್ತಿದೆ. ಇನ್ನೇನು 5-6 ತಿಂಗಳುಗಳಲ್ಲಿ ಆಸ್ಪತ್ರೆ ಕೆಲಸ ಪೂರ್ಣಗೊಳ್ಳಲಿದೆ. ನೀವೆಲ್ಲರೂ ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ನನ್ನ ಮನಸ್ಸು ತುಂಬಿ ಬಂದಿದೆ. ನಿಮಗೆ ನಾನು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಈ ಭಾಗದ ಜನರು ಶಾಶ್ವತವಾಗಿ ನನ್ನ ಮನಸ್ಸಲ್ಲಿರುವಿರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಂ.ಬಿ.ಬಿ.ಎಸ್ ವೈದ್ಯರಾದ ಡಾ.ನವೀನ ಸಿ. ಹೆಗಡೆ ಅವರಿಗೆ ವೇದಿಕೆಯಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ವೇದಿಕೆಯಲ್ಲಿದ್ದ ಡೋಂಗ್ರಿ ಗ್ರಾ.ಪಂ ಅಧ್ಯಕ್ಷ ವಿನೋದ ಭಟ್ಟ, ಗ್ರಾ.ಪಂ ಸದಸ್ಯ ನಾರಾಯಣ ಭಟ್ಟ ಜಾಯಿಕಾಯಿಮನೆ ಮಾತನಾಡಿದರು. ಟಿ.ಎಸ್.ಎಸ್.ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ ಸಭಾಧ್ಯಕ್ಷ ಸ್ಥಾನವನ್ನು ವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಕಾಶ ಹೆಗಡೆ ಕಲ್ಲೇಶ್ವರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರಾಘವೇಂದ್ರ ಹೆಗಡೆ ಕಲ್ಲೇಶ್ವರ ಸನ್ಮಾನ ಪತ್ರವನ್ನು ವಾಚಿಸಿದರು. ಶೇಖರ್ ಗಾಂವಕರ್ ಕಾರ್ಯಕ್ರಮ ನಿರೂಪಿಸಿದರು.