Slide
Slide
Slide
previous arrow
next arrow

ಪುರುಷ ಪ್ರಯತ್ನದಿಂದ ಅದೃಷ್ಟವನ್ನು ದಾಟಬೇಕು: ಸ್ವರ್ಣವಲ್ಲೀ ಶ್ರೀ

300x250 AD

ಭಗವದ್ಗೀತೆ ಚಿಂತನೆ ನಿತ್ಯವೂ ನಡೆಯಲಿ | ಚಾತುರ್ಮಾಸ್ಯ ನಿಮಿತ್ತ ಕಿಸಲವಾಡ ಸೀಮಾ ಭಕ್ತರ ಸೇವೆ

ಶಿರಸಿ: ಮನುಷ್ಯನ ಜೀವನ ಎನ್ನುವುದು ಒಂದು ರೀತಿಯಲ್ಲಿ ಹೋಯ್ದಾಟ. ನಮ್ಮ ಪ್ರಯತ್ನ, ಈಶ್ವರ ಇಚ್ಛೆ, ಅದೃಷ್ಟ ಇವು ಮೂವರು ಪರಸ್ಪರ ಕಚ್ಚಾಟ ಮಾಡಿಕೊಳ್ಳುತ್ತಿದ್ದಾರೆ. ನಾವು ಏನೋ ಒಂದನ್ನು ಮಾಡುವುದಕ್ಕೆ ಹೊರಟಿರುತ್ತೇವೆ ಆದರೆ ಈಶ್ವರ ಇಚ್ಛೆ ಬೇರೆಯಾಗಿರುತ್ತದೆ ಅಥವಾ ನಮ್ಮ ದುರದೃಷ್ಟ ಬೇರೆಯಾಗಿರುತ್ತದೆ. ಎಲ್ಲರ ಜೀವನದಲ್ಲೂ ಇದು ಆಗುತ್ತಲೇ ಇರುತ್ತದೆ. ಈ ಮೂರರ ಸ್ಪರ್ಧೆ ನಮ್ಮ ಜೀವನದಲ್ಲಿ ಪ್ರತಿನಿತ್ಯವೂ ಇರುತ್ತದೆ. ಈ ಮೂವರ ಪೈಕಿ ಪುರುಷ ಪ್ರಯತ್ನ ಎನ್ನುವುದು ಸನ್ಮಾರ್ಗದಲ್ಲಿ ನಡೆದರೆ ಅದಕ್ಕೆ ಹೆಚ್ಚಿಗೆ ಬಲ ಬರಲು ಸಾಧ್ಯವಿದೆ, ನಮ್ಮ ಕೈ ಅಲ್ಲಿ ಇರುವುದು ಇದೊಂದೇ ಎಂದು ಶ್ರೀ ಸೋಂದಾ‌ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

ಅವರು ತಮ್ಮ ಹಾಗೂ‌ ಮಠದ ಕಿರಿಯ ಶ್ರೀಗಳಾದ ಆನಂದಬೊಧೇಂದ್ರ ಸರಸ್ವತೀ‌ ಸ್ವಾಮೀಜಿಗಳ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಕಿಸಲವಾಡ ಸೀಮೆಯ ಶಿಷ್ಯರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

300x250 AD

ಪುರುಷ ಪ್ರಯತ್ನಕ್ಕೆ ಹೆಚ್ಚು ಬಲ ಕೊಡುವ ಮೂಲಕ ಇಹ – ಪರದ ಸಾಧನೆಯಲ್ಲಿ ತೊಡಗಬೇಕು. ಪ್ರಯತ್ನಕ್ಕೆ ನಮ್ಮ ಅದೃಷ್ಟ ಒಮ್ಮೊಮ್ಮೆ ಅಡ್ಡಿಯಾಗುವ ಸಂಭವ ಇರುತ್ತದೆ ಆದರೂ ಕೂಡ ಪುರುಷ ಪ್ರಯತ್ನದಿಂದ ಅದನ್ನು ದಾಟಬೇಕು. ಹಾಗೆಯೇ ಪರದ ಪ್ರಯತ್ನ. ಪರಲೋಕಿಕವಾಗಿ ಹೆಚ್ಚಿನ ಸಾಧನೆ ಮಾಡುವುದಕ್ಕೋಸ್ಕರವೇ ಮನುಷ್ಯರಾಗಿ ಬಂದಿದ್ದೇವೆ ಎಂದರು. ಅಲ್ಲಿಯೂ ಕೂಡ ಅನೇಕ ಅಡ್ಡಿಗಳು ಬರುತ್ತವೆ. ಅವುಗಳನ್ನು ಪುರುಷ ಪ್ರಯತ್ನದ ಮೂಲಕ ದಾಟಬೇಕು. ಈ ರೀತಿ ಪುರುಷ ಪ್ರಯತ್ನದ ಮೂಲಕ ದಾಟುವ ಸಾಮರ್ಥ್ಯ ಇರುವುದು ಮನುಷ್ಯನಿಗೆ ಮಾತ್ರ. ಅದಕ್ಕಾಗಿ ಪುರುಷ ಪ್ರಯತ್ನದ ಮೂಲಕ ಪುರುಷಾರ್ಥಕ್ಕೆ ಸಾಧನೆಗೆ ತೊಡಗಬೇಕು. ಪುರುಷಾರ್ಥ, ಅದೃಷ್ಟ, ಈಶ್ವರ ಇಚ್ಛೆ ಈ ಮೂರರಲ್ಲಿ ಪರಸ್ಪರ ವಿರೋಧಗಳು ಇರುತ್ತವೆ. ಅದಕ್ಕಾಗಿಯೇ ತೊಡಕುಗಳು ಬರುತ್ತದೆ ಎಂದರು.
ಆಧ್ಯಾತ್ಮಿಕ ಸಾಧನೆಯ ಕ್ಷೇತ್ರದಲ್ಲೂ ತೊಡಕುಗಳು ಇರುತ್ತವೆ. ಕರ್ತವ್ಯಗಳ ತೊಡಕುಗಳು, ದುರದೃಷ್ಟಗಳ ತೊಡಕುಗಳು ಬರುತ್ತವೆ. ಇವುಗಳೆಲ್ಲ ನಮ್ಮ ಹಿಂದಿನ ಜನ್ಮದ ಅದೃಷ್ಟಗಳ ಕಾರಣದಿಂದ ಬರುತ್ತವೆ. ಇಲ್ಲವೋ ದೈವ ಇಚ್ಚೆಯಿಂದ ಬರುತ್ತದೆ. ಅವುಗಳನ್ನು ತೀವ್ರವಾದ ಪುರುಷ ಪ್ರಯತ್ನದ ಮೂಲಕ ದಾಟಲು ಸಾಧ್ಯವಿದೆ. ದಾಟಬೇಕು. ಒಂದು ಪ್ರಸಿದ್ಧವಾದ ಸುಭಾಷಿತವನ್ನು ವಿವರಿಸಿದರು. ನಿನ್ನ ಆತ್ಮಶಕ್ತಿಯಿಂದ ದೈವವನ್ನೂ ಕೂಡ ಗೆದ್ದು ಮುಂದೇಹೋಗು ಎಂಬುದಾಗಿ. ಆತ್ಮ ಶಕ್ತಿ ಎಂದರೆ ನಿರುತ್ಸಾಹ ಮಾಡಿಕೊಳ್ಳದೇ ಮುಂದೆ ಕೆಲಸ ಮಾಡುವಂತಹ ಸಂಕಲ್ಪ ಶಕ್ತಿ. ಅದರಿಂದಲೇ ಅನೇಕ ಸಲ ಗೆಲ್ಲಲು ಸಾಧ್ಯ ಎಂದರು.
ಯೋಗವಾಸಿಷ್ಠ ಗ್ರಂಥವು ಪುರುಷ ಪ್ರಯತ್ನದ ಮಹತ್ವವನ್ನು ತುಂಬಾ ದೀರ್ಘವಾಗಿ ಕೊಂಡಾಡುತ್ತದೆ. ನಮ್ಮ ಜೀವನದಲ್ಲಿ ಯಾವುದು ಪ್ರಭಲವೋ ಅದು ಗೆಲ್ಲುತ್ತದೆ. ಯಾವುದು ದುರ್ಲಭವೋ ಅದು ಸೋಲುತ್ತದೆ. ಆದ್ದರಿಂದ ನಮ್ಮ ಪ್ರಯತ್ನವನ್ನು ಪ್ರಭಲವಾಗಿಸಿಕೊಳ್ಳಬೇಕು. ಶಾಸ್ತ್ರಗಳು ಇದಕ್ಕೆ ಉಪಾಯಗಳನ್ನು ಹೇಳುತ್ತವೆ. ಆ ಉಪಾಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಪ್ರಯತ್ನವನ್ನು ಬಲಪಡಿಸಿಕೊಳ್ಳಲು ಸಾಧ್ಯವಿದೆ. ನಮ್ಮ ಪ್ರಯತ್ನದಿಂದಲೇ ಕಷ್ಟಗಳನ್ನು ದಾಟಲು ಸಾಧ್ಯವಾಗುತ್ತದೆ. ಪುಣ್ಯ ಮತ್ತು ಪಾಪ ಕರ್ಮ ಇವೆರಡರಲ್ಲಿ ಪಾಪಕರ್ಮವು ನಮಗೆ ಬಾಧಕವಾಗುತ್ತದೆ. ಅವುಗಳನ್ನು ಈಗಿನ ಕರ್ಮಗಳನ್ನು ಮಾಡುವುದರ ಮೂಲಕ ಅದರಿಂದ ಗೆಲ್ಲಬೇಕು ಎಂದರು.
ನಮ್ಮ ಪ್ರಯತ್ನ ಯಾವ ರೀತಿಯಾಗಿ ಇರಬೇಕು ಎಂದು ವಿವರಿಸಿದರು. ಪ್ರತಿದಿನವೂ ನಮ್ಮ ಶರೀರ ಕ್ಷೀಣಿಸುತ್ತಲೇ ಇರುತ್ತದೆ. ಜೀವನವೇ ನಶ್ವರ ಪ್ರತಿದಿನವೂ ಕ್ಷೀಣಿಸುತ್ತಾ ಹೋಗುವುದೇ ಶರೀರದ ಸ್ವಭಾವ. ಇದನ್ನು ನಾವು ಅರ್ಥ ಮಾಡಿಕೊಂಡು ಪ್ರಾಣಿ ಸಹಜವಾದ ವರ್ತನೆಗಳನ್ನು ಕಡಿಮೆ ಮಾಡುತ್ತಾ , ಸತ್ಪುರುಷರ ವರ್ತನೆಯನ್ನು ರೂಢಿಸಿಕೊಳ್ಳುತ್ತ ಹೋಗಬೇಕು. ಅವರು ಶಮ ದಮಗಳಿಂದ ಮನಸ್ಸನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೆ. ಹೊರ ಇಂದ್ರಿಯಗಳನ್ನು ನಿಗ್ರಹಿಸುತ್ತಾರೆ. ಎಲ್ಲಾ ಪ್ರಾಣಿಗಳ ಬಗ್ಗೆ ಸಹಜವಾದ ದಯೇ , ಎಲ್ಲಾ ಮನುಷ್ಯರಲ್ಲಿ ಮೈತ್ರಿ ಭಾವ, ದೇವರಲ್ಲಿ ಏಕಾಗ್ರತೆ ಈ ಗುಣಗಳನ್ನು ನಮ್ಮಲ್ಲಿ ನಾವು ಅಳವಡಿಸಿಕೊಳ್ಳಬೇಕು. ಅಲ್ಲಿ ಪರುಷ ಪ್ರಯತ್ನ ಬೇಕು ಎಂದರು. ಸಾಧು ಸಂಗಮ, ಶಾಸ್ತ್ರಗಳ ಮೂಲಕ ನಮ್ಮನ್ನು ನಾವು ಹೆಚ್ಚಿನ ಬಲ ಹಾಕುವುದರ ಮೂಲಕ ಸಾಧನೆಯಲ್ಲಿ ತೊಡಗಬೇಕು‌ ಎಂದರು.
ಭಗವದ್ಗೀತೆಯಂತಹ ಗ್ರಂಥಗಳ ಚಿಂತನೆ ನಿತ್ಯವೂ ಆಗಬೇಕು. ಏನೇನೋ ಕೆಲಸಗಳು, ಅಡ್ಡಿಗಳು ಬರುತ್ತವೆ. ಏನೇ ಬಂದರು ಗಟ್ಟಿಯಾಗಿ ಕೂತು ಚಿಂತನೆಯನ್ನು ಮಾಡಬೇಕು. ಮನುಷ್ಯ ಶರೀರವು ಅತ್ಯಂತ ಮಹತ್ವದ್ದು. ಇದನ್ನು ನಾವು ಸಂಸಾರವೆಂಬ ಮಹಾ ಸಮುದ್ರವನ್ನು ದಾಟಲು ಬಳಸಿಕೊಳ್ಳಬೇಕು. ಶರೀರ ಎಂಬ ಈ ನೌಕೆ ಎಷ್ಟೊತ್ತಿಗೆ ಒಡೆದು ಹೋಗುತ್ತದೆಯೋ ಎಂಬುದು ಯಾರಿಗೂ ಗೊತ್ತಿಲ್ಲ. ಅದು ಒಡೆದು ಹೋಗುವ ಪೂರ್ವದಲ್ಲೇ ಸಂಸಾರವೆಂಬ ಸಮುದ್ರವನ್ನು ದಾಟಿಬಿಡೇಬೇಕು ಎಂದರು.
ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಿಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಸೀಮೆಯ ಪ್ರಮುಖರಾದ ವಿಶ್ವನಾಥ ಹೆಗಡೆ, ಪ್ರಶಾಂತ ಭಟ್ಟ, ಗಣಪತಿ ಭಟ್ ಇತರರು ಇದ್ದರು.

Share This
300x250 AD
300x250 AD
300x250 AD
Back to top