ದಾಂಡೇಲಿ : ಈಗಾಗಲೇ ಲೋಕಸಭಾ ಚುನಾವಣೆ ನಡೆದು ಕೆಲ ತಿಂಗಳಷ್ಟೇ ನಡೆದಿದ್ದು, ಈ ಅವಧಿಯಲ್ಲಿ ಹಲವು ದಿನಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧವನ್ನು ಹೇರಲಾಗಿತ್ತು. ಮೊದಲೇ ಮದ್ಯದ ದರವು ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಬರುವ ಚೌತಿ ಸಂದರ್ಭದಲ್ಲಿ ದಾಂಡೇಲಿ ನಗರದಲ್ಲಿ ಈ ಬಾರಿ ಗಣಪತಿ ವಿಸರ್ಜನಾ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಕೊಡಮಾಡುವ ರಜೆಯನ್ನು ಎರಡೇ ದಿನಕ್ಕೆ ಸೀಮಿತಗೊಳಿಸುವಂತೆ ವಿನಂತಿಸಿ ನಗರದ ಮದ್ಯ ಮಾರಾಟಗಾರರು ಬುಧವಾರ ಸಂಜೆ ದಾಂಡೇಲಿ ಪೊಲೀಸ್ ವೃತ್ತ ನಿರೀಕ್ಷಕರಾದ ಭೀಮಣ್ಣ.ಎಂ.ಸೂರಿ ಅವರಿಗೆ ಲಿಖಿತ ಮನವಿಯನ್ನು ನೀಡಿದರು.
ಮನವಿಯಲ್ಲಿ ಈ ಹಿಂದಿನ ಚೌತಿಯ ಗಣೇಶನ ವಿಸರ್ಜನಾ ಸಂದರ್ಭದಲ್ಲಿ 5, 7, 9, 11ನೇ ದಿನದ ವಿಸರ್ಜನಾ ದಿನಗಳಲ್ಲಿ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಲಾಗುತ್ತಿತ್ತು. ದಾಂಡೇಲಿ ಶಾಂತಿಪ್ರಿಯ ನಗರವಾಗಿರುವುದರಿಂದ ಹಾಗೂ ಸರ್ವಧರ್ಮ ಸಮನ್ವಯತೆಯ ನಗರವಾಗಿರುವ ಹಿನ್ನೆಲೆಯಲ್ಲಿ ಮತ್ತು ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಚೌತಿ ಆಚರಣೆಯಾಗುತ್ತಿರುವುದರಿಂದ ಈ ಬಾರಿ ಚೌತಿಯ ಗಣೇಶನ ವಿಸರ್ಜನಾ ಸಂದರ್ಭದಲ್ಲಿ ಸೆ:15 ಮತ್ತು ಸೆ:17ರಂದು ಅಂದರೆ 9 ಮತ್ತು 11ನೇ ದಿನದ ಗಣಪತಿ ವಿಸರ್ಜನೆಯ ದಿನದಂದು ಮಾತ್ರ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಬೇಕೆಂದು ಮತ್ತು ಉಳಿದ ದಿನ ಅಂದರೆ ಗಣೇಶನ ವಿಸರ್ಜನೆಯ 5ನೇ ದಿನ ಮತ್ತು 7ನೇ ದಿನ ಯಾವುದೇ ಕಾರಣಕ್ಕೂ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಬಾರದೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಮದ್ಯ ಮಾರಾಟಗಾರರಾದ ಉದಯ ಶೆಟ್ಟಿ, ನರೇಂದ್ರ ಚೌಹ್ವಾಣ್, ಕರುಣಾಕರ ಶೆಟ್ಟಿ, ವಿಷ್ಣು ಕಲಾಲ್ ಮತ್ತು ನಮನ್ ಶೆಟ್ಟಿ ಅವರು ಉಪಸ್ಥಿತರಿದ್ದರು.