ಯಲ್ಲಾಪುರ: ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾದಡಿ ಹೆಚ್ಚು ಹೆಚ್ಚು ಸಾರ್ವಜನಿಕ ಕಾಮಗಾರಿಗಳನ್ನು ಪ್ರಾರಂಭಿಸುವ ಮೂಲಕ ಗ್ರಾಮೀಣ ಕೂಲಿಕಾರರಿಗೆ ಕೂಲಿ ಕೆಲಸ ಒದಗಿಸಿ ನಿಗದಿತ ಮಾನವ ದಿನ ಗುರಿ ಸಾಧನೆ ಪೂರೈಸುವಂತೆ ತಾಲ್ಲೂಕಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಅಭಿಯಂತರರಿಗೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ ರವರು ಸೂಚನೆ ನೀಡಿದರು.
ಯಲ್ಲಾಪುರ ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ಜರುಗಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಗ್ರಾಮ ಪಂಚಾಯತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳಿಗೆ ಆದ್ಯತೆಯ ಮೇರೆಗೆ ನರೇಗಾ ಸೇರಿದಂತೆ ಬೇರೆ ಬೇರೆ ಯೋಜನೆಗಳ ಅನುದಾನ ಬಳಸಿ ಮಳೆನೀರು ಕೊಯ್ಲು ಘಟಕ, ಪ್ರತೀ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಮರುಪೂರಣ ಘಟಕ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮುಂದಿನ 2-3 ದಿನಗಳ ಒಳಗೆ ಆದ್ಯತಾ ಕಾಮಗಾರಿಗಳಾದ ಗ್ರಾಪಂವಾರು 300 ಹಣ್ಣಿನ ಗಿಡ ನೆಡುವ ಕಾಮಗಾರಿ, ಮಳೆನೀರು ಕೊಯ್ಲು ಘಟಕ, ಕೊಳವೆ ಬಾವಿ ಮರುಪೂರಣ ಘಟಕ ಕಾಮಗಾರಿ, ಶಾಲಾ ಕಾಂಪೌಂಡ್, ಶೌಚಾಲಯ, ಆಟದ ಮೈದಾನ, ಅಡುಗೆ ಕೋಣೆ ಹಾಗೂ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಕೂಡಲೇ ತಾಂತ್ರಿಕ ಅಂದಾಜು ಪತ್ರಿಕೆ ತಯಾರಿಸಿಕೊಂಡು ವರ್ಕ್ ಎಂಟ್ರಿ ಮಾಡಿ ಕಾಮಗಾರಿ ಪ್ರಾರಂಭಿಸಬೇಕು. ಈ ಮೂಲಕ ಹಳ್ಳಿಗಳ ಜನರಿಗೆ ಕೂಲಿ ಕೆಲಸ ಒದಗಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿಯಾನದ ರೀತಿಯಲ್ಲಿ ಪಿಒಎಸ್ ಮಿಷನ್ ಬಳಸಿಕೊಂಡು ಮನೆ ಮನೆಗೆ ತೆರಳಿ ವಾಣಿಜ್ಯ ಚಟುವಟಿಕೆಗಳ ತೆರಿಗೆ ವಸುಲಾತಿ ಮಾಡುವ ಕಾರ್ಯವಾಗಬೇಕು. ಜೊತೆಗೆ ಸಂಗ್ರಹಿತ ತೆರಿಗೆಯಲ್ಲಿ ಎಸ್ಸಿ, ಎಸ್ಟಿ, ವಿಕಲ ಚೇತನರಿಗೆ ನಿಯಮಾನುಸಾರ ಹಣ ಖರ್ಚು ಮಾಡಬೇಕು. ವಿವಿಧ ವಸತಿ ಯೋಜನೆಯಡಿ ಮಂಜುರಾದ ವಸತಿ ಮನೆಗಳ ಕಾಮಗಾರಿ ಪ್ರಾರಂಭ ಹಾಗೂ ಕಂಪ್ಲಿಷನ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಒಹೆಚ್ಟಿ ಗಳನ್ನು ಸ್ವಚ್ಛಗೊಳಿಸಿ, ನೀರುಗಂಟಿಗಳ ಮೂಲಕ ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆ ಮಾಡಿಸಬೇಕು. ಕುಡಿಯಲು ಯೋಗ್ಯವಿರುವ ನೀರಿನ ಮೂಲವನ್ನು ಮಾತ್ರ ಬಳಸುವಂತೆ ಹಾಗೂ ಯೋಗ್ಯವಿರದ ಜಲ ಮೂಲ ಬಳಸದಂತೆ ಸ್ಥಳದಲ್ಲಿ ಸಾರ್ವಜನಿಕ ಮಾಹಿತಿ ಫಲಕ ಅಳವಡಿಸಬೇಕು ಎಂದರು.
ಸಭೆಯಲ್ಲಿ ತಾಪಂ ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ನರೇಗಾದಡಿ ಕಾರ್ಯನಿರ್ವಹಿಸುವ ಟಿಐಇಸಿ, ಟಿಸಿ, ಟಿಎಂಐಎಸ್, ಟಿಎಇ ಗಳು ಸೇರಿದಂತೆ ತಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.