ಶಿರಸಿ: ವೈದ್ಯನೊಬ್ಬ ರೋಗಿಯ ಮೇಲೆ ಪ್ರಭಾವ ಬೀರುವುದರಿಂದ ರೋಗ ಕಡಿಮೆ ಮಾಡಿಸುತ್ತದೆ. ವೈದ್ಯಕೀಯ ವೃತ್ತಿ ಆಗದೇ ಸೇವೆ ಆಗಲಿ ಎಂದು ಶ್ರೀಕ್ಷೇತ್ರ ಮಂಜುಗುಣಿಯ ವೇ.ಮೂ.ಶ್ರೀನಿವಾಸ ಭಟ್ಟ ಹೇಳಿದರು.
ಅವರು ಮಂಗಳವಾರ ಆಯುರ್ವೇದ ಶಿಕ್ಷಣ ಪಡೆದು ಸ್ವಂತ ಊರಿನ ನೊಂದ ರೋಗಿಗಳಿಗೆ ಸೇವೆ ಸಲ್ಲಿಸಲು ಸಜ್ಜಾಗಿರುವ ಮಧು ಸಂಜೀವಿನಿ ಆಸ್ಪತ್ರೆ ಉದ್ಘಾಟಿಸಿ, ಆಧುನಿಕ ಜಗತ್ತಿನಲ್ಲಿ ಆಯುರ್ವೇದ ಕೃತಿ ಮಾಲಿಕೆಯಲ್ಲಿ ಬೊಜ್ಜಿನ ನಿರ್ವಹಣೆ ಕುರಿತು ಡಾ. ಮಧು ಮಧುಕೇಶ್ವರ ಹೆಗಡೆ ಬರೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವೈದ್ಯಕೀಯ ವ್ಯಕ್ತಿಯ ಪ್ರಭಾವ ಮೂಡಿಸಿದಷ್ಟು ಅದು ಪ್ರಬಲವಾಗಿ ಮೂಡುತ್ತದೆ. ವೃತ್ತಿಯಾಗಿ ತೆಗೆದುಕೊಂಡರೆ ಹಣ ಮಾಡಬಹುದು. ಸೇವೆ ಆದರೆ ಜನ ಬಹುಕಾಲ ನೆನಪಿಸಿಕೊಳ್ಳುತ್ತಾರೆ. ರೋಗಿಗಳಿಗೆ ತೊಂದರೆ ಆಗದಂತೆ ಸೇವೆ ಕೊಡಬೇಕು ಎಂದರು. ಸಿದ್ದಾಪುರ ಆಯುರ್ವೇದ ಮಹಾವಿದ್ಯಾಲಯದ ಡಾ. ಶಶಿಭೂಷಣ ಹೆಗಡೆ, ರೋಗ ಉಪಶಮನದ ಜೊತೆಗೆ ಆರೋಗ್ಯವರ್ಧನಕ್ಕೂ ವೈದ್ಯರ ಸೇವೆ ಬಳಸಿಕೊಳ್ಳಬಹುದು. ರೋಗ ಇಲ್ಲದಿದ್ದರೂ ಬದುಕಿನ ಶೈಲಿಗೆ ನೆರವು ಪಡೆಯಲು ಮುಂದಾಗಬೇಕು ಎಂದರು. ಟಿಎಂಎಸ್ ಅಧ್ಯಕ್ಷ ಜಿ.ಟಿ ಹೆಗಡೆ ತಟ್ಟಿಸರ, ಆಯುರ್ವೇದಕ್ಕೆ ಅಪಾರ ಮಹತ್ವ ಇದೆ. ಅಡ್ಡ ಪರಿಣಾಮಗಳು ಆಯುರ್ವೇದದಲ್ಲಿ ಆಗುವದಿಲ್ಲ ಎಂಬ ಭರವಸೆ ಜನರಲ್ಲಿದೆ. ಆಯುರ್ವೇದದಲ್ಲಿ ಗುಣವಾದರೆ ಮತ್ತೆ ರೋಗ ಬರೋದಿಲ್ಲ ಎಂದರು.
ಪ್ರಸಿದ್ಧ ನೇತ್ರತಜ್ಞ ಡಾ. ಶಿವರಾಮ ಕೆ.ವಿ. ಯಾವುದೇ ಪದ್ದತಿ ಒಂದಕ್ಕೊಂದು ಪೂರಕ. ಆಯುರ್ವೇದಿಕ್, ಅಲೋಪತಿ, ಹೋಮಿಯೋಪತಿ ಎಲ್ಲವುಗಳ ಒಳ್ಳೆಯದನ್ನು ತೆಗೆದುಕೊಳ್ಳಬೇಕು. ರೋಗಿಗೆ ಬೇಕಾಗಿದ್ದನ್ನು ನೋಡಬೇಕು. ಜನರಿಗೆ ಆರೋಗ್ಯಕರ ಜೀವನ ನಡೆಸಲು ನೆರವಾಗಬೇಕು ಎಂದರು.
ಸಹಕಾರಿ ಪ್ರಮುಖ ಎಸ್.ಕೆ.ಭಾಗವತ, ಆಯುರ್ವೇದಿಂದ ಆರೋಗ್ಯ ವರ್ಧನೆ ಸಾಧ್ಯ. ನಮ್ಮೂರಿನ ಪ್ರತಿಭೆ ನಮ್ಮೂರಲ್ಲೇ ಆಸ್ಪತ್ರೆಯ ಮಾಡಿದ್ದು, ಜನ ಸೇವೆಯ ಮೂಲಕ ಈ ಕ್ಷೇತ್ರದಲ್ಲಿ ಬೆಳೆಯಲಿ ಎಂದರು.
ನ್ಯಾಯವಾದಿ ಸದಾನಂದ ಭಟ್ಟ, ವಕೀಲರ ಬಳಿ, ವೈದ್ಯರ ಬಳಿ ಯಾರೂ ಬೇಕಂತ ಬರುವದಿಲ್ಲ. ಬಂದವರಿಗೆ ನೆಮ್ಮದಿ ಕೊಡಬೇಕು ಎಂದರು.
ಮಕ್ಕಳ ತಜ್ಞ ಡಾ. ದಿನೇಶ ಹೆಗಡೆ, ಜೀವನ ವಿಧಾನದಲ್ಲಿ ಯೋಗ, ಗುಣಮಟ್ಟದ ಆಹಾರ ಬಳಸಿದರೆ ನಿರೋಗಿಯಾಗಬಹುದು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಡಾ. ಮಧು ಹೆಗಡೆ, ಸವಿತಾ ಹೆಗಡೆ, ಡಾ. ಮಧುಕೇಶ್ವರ ಹೆಗಡೆ ಇದ್ದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿದರು.