ಶಿರಸಿ: ಶಿರಸಿ ನಗರದ ಬನವಾಸಿ ರಸ್ತೆಯಲ್ಲಿರುವ ರಾಮನಬೈಲಿನ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ನವರು ಕೊಡಲ್ಪಡುವ ಈ ವರ್ಷದ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ಲಭಿಸಿದೆ.
ಯೂತ್ ಫಾರ್ ಸೇವಾ ಸಂಸ್ಥೆ ಬೆಂಗಳೂರು ಇದರ ಪರಿಸರ ಸಂಯೋಜಕ ಉಮಾಪತಿ ಭಟ್ಟ್ ಇವರ ಮಾರ್ಗದರ್ಶನದಲ್ಲಿ ಶಾಲೆಯಲ್ಲಿ ಔಷಧವನ ನಿರ್ಮಿಸಿ 200 ಗಿಡಗಳನ್ನು ಬೆಳೆಸಲಾಗಿದೆ.ಇಲ್ಲಿನ ವಿಶೇಷಗಳೆಂದರೆ ಮುಖ್ಯ ಶಿಕ್ಷಕರಾದ ಗೀತಾ ಜೋಗಳೆಕರ ಹಾಗೂ ಶಿಕ್ಷಕರಾದ ಮೋಹನನಾಯ, ಜಟ್ಟಪ್ಪ ನಾಯ್ಕ ಎನ್.ಬಿ .ನಾಯ್ಕ ಅವರ ಪರಿಶ್ರಮದಿಂದ ಒಂದು ಪಾಂಡವರ ವನ, ಸ್ಮರಣಶಕ್ತಿ ವನ, ಚಮತ್ಕಾರಿಕ ವನ , ನವಗ್ರಹವನ ನಿರ್ಮಾಣ ಮಾಡಲಾಗಿದೆ. ಮಕ್ಕಳೇ ಗಿಡಗಳನ್ನು ಪರಿಚಯ ಮಾಡುತ್ತಾರೆ. ಮಕ್ಕಳೇ ಗಿಡಗಳನ್ನು ನರ್ಸರಿ ಮಾಡಿ ಸಸ್ಯಸಂತೆ ನಡೆಸಿ ಪಾಲಕರಿಗೆ ಉಚಿತವಾಗಿ ವಿತರಿಸುತ್ತಾರೆ. ಮಕ್ಕಳು ತಮ್ಮ ಹುಟ್ಟು ಹಬ್ಬದ ದಿನದಂದು ಚಾಕಲೇಟ್ ಬದಲು ಔಷಧಿಯ ಸಸ್ಯಗಳನ್ನು ಶಾಲೆಗೆ ನೀಡಿ ಬೆಳೆಸುತ್ತಾರೆ. 10 ಸಾವಿರ ರೂ ನಗದು, 8 ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನೊಳಗೊಂಡ ಹಸಿರು ಪ್ರಶಸ್ತಿಯನ್ನು ಟ್ರಸ್ಟಿನ ಮಧುಸೂದನ ಸಾಯಿ ಅವರು ಪ್ರದಾನ ಮಾಡಿದರು. ಯೂತ್ ಪಾರ್ ಸೇವಾಸಂಸ್ಥೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು,ಎಸ್.ಡಿ.ಎಂ.ಸಿ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.