ನೆರೆ ಸಂತ್ರಸ್ತರಿಗೆ ಮನೆಯಿಲ್ಲ, ಅಧಿಕಾರಿಗಳಿಗೆ ಕೆಲಸದ ದರ್ದಿಲ್ಲ
ಕಾರವಾರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇರಳದ ವಯನಾಡು ಭಾಗದಲ್ಲಿನ ಮಳೆ ದುರಂತಕ್ಕೆ ಸ್ಪಂದಿಸಿ ಸಂತ್ರಸ್ತರಿಗೆ ಕರ್ನಾಟಕ ಸರಕಾರ ನೂರು ಮನೆಗಳನ್ನು ಕಟ್ಟಿಸಿಕೊಡುತ್ತದೆ ಎಂದು ಹೇಳಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ರಾಜ್ಯದ ಅನೇಕ ಕಡೆಗಳಲ್ಲಿ ನೂರಾರು ಜನರು ನೆರೆಯ ಕಾರಣಕ್ಕೆ ಮನೆಯನ್ನು ಕಳೆದುಕೊಂಡಿದ್ದಾರೆ. ಅದರಲ್ಲಿಯೂ ಜಿಲ್ಲೆಯ ಶಿರೂರಿನಲ್ಲಾದ ದುರಂತವಿನ್ನೂ ನಮ್ಮೆಲ್ಲರ ಕಣ್ಮುಂದಿರುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನಿರ್ಧಾರಕ್ಕೆ ರಾಜ್ಯದ ಜನತೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಜನರು ಮನುಷ್ಯರಲ್ಲವೇ ?
ಜಿಲ್ಲೆಯ ಶಿರೂರು ದುರಂತದಲ್ಲಿ ಈಗಾಗಲೇ 11 ಜನ ಕಾಣೆಯಾಗಿದ್ದರು ಎನ್ನಲಾಗಿದ್ದು, ಅದರಲ್ಲಿ 8 ಜನರ ಶವ ದೊರೆತಿದೆ. ಉಳುವರೆ ಗ್ರಾಮದಲ್ಲಿಅನೇಕರು ಮನೆಯನ್ನು ಸಂಪೂರ್ಣ ಕಳೆದುಕೊಂಡಿದ್ದು, ನಮ್ಮ ಜಿಲ್ಲೆಯ ಜನರು ಜನರಲ್ಲವೇ ಸಿದ್ಧರಾಮಯ್ಯನವರೇ ? ಹೈ ಕಮಾಂಡ್ ಮೆಚ್ಚಿಸಲು, ಮುಖ್ಯಮಂತ್ರಿ ಗಾದಿ ಭದ್ರವಾಗಿಟ್ಟುಕೊಳ್ಳಲು ಕೇರಳಕ್ಕೆ 100 ಮನೆಗಳನ್ನು ನಿರ್ಮಿಸಿಕೊಡುವ ಯೋಚನೆ ಮಾಡಿರುವ ಸಿದ್ಧರಾಮಯ್ಯನವರಿಗೆ, ಜಿಲ್ಲೆಯ ಜನರ ಕಷ್ಟ ಕಾಣುತ್ತಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ?
ಜಿಲ್ಲೆಯ ರಾಜಕಾರಣಿಗಳಿಗೆ ಧಮ್ಮಿಲ್ಲ ಬಿಡಿ !
ಕಳೆದ ಹತ್ತು, ಇಪ್ಪತ್ತು, ಮೂವತ್ತು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯನ್ನು ಆಳುತ್ತಿರುವ ರಾಜಕಾರಣಿಗಳ ಕಣ್ಣಿನಲ್ಲಿ ರಕ್ತ ಇರುವಂತೆ ಕಾಣುತ್ತಿಲ್ಲ. ಜನಪ್ರತಿನಿಧಿಗೆ ಮೊದಲು ಇರಬೇಕಾಗಿದ್ದು ಮಾನವೀಯತೆ. ತನ್ನ ಜನರ ಕಷ್ಟಕ್ಕಾಗಿ ಮಿಡಿಯುವ ಮನಸ್ಸು. ಇಷ್ಟು ಜನರಿಗೆ ಸಮಸ್ಯೆ ಆಯ್ತು. ಯಾರಿಗೆ ಯಾವ ರಾಜಕಾರಣಿ ಮನೆ ಕಟ್ಟಿಸಿಕೊಟ್ಟಿದ್ದಾನೆ ? ಸ್ವಂತ ದುಡ್ಡಿನಲ್ಲಿ ಕಟ್ಟಿಸುವುದು ಕನಸಿನ ಮಾತು, ಸರಕಾರಕ್ಕೆ ಆಗ್ರಹ ಮಾಡಿ, ಕೇಳದಿದ್ದರೆ ಹೋರಾಟ ಮಾಡಿ ತಮ್ಮೂರೊನ ಜನರಿಗೆ ಮನೆ ದೊರಕಿಸಿಕೊಡುವ ಪ್ರಯತ್ನ ಮಾಡಬಹುದಿತ್ತಲ್ಲ ? ಇಂತವರಿಗೆ ಜನರ ಮತದ ಭಿಲ್ಷೆ ಬೇಕು, ಆದರೆ ಕಷ್ಟಕಾಲದಲ್ಲಿ ಸಹಾಯ ಮಾಡುವ ಮಾನವೀಯತೆ ಇವರಿಗಿಲ್ಲ. ತಮ್ಮ ತಮ್ಮ ರಾಜಕೀಯ ಉನ್ನತಿಗಾಗಿ ನೋಡುತ್ತಾರೆಯೇ ವಿನಃ ಜನರಿಗಾಗಿ ಬದುಕುವ ಯಾವ ಜನಪ್ರತಿನಿಧಿಯೂ ಇದ್ದಂತೆ ಕಾಣುವುದಿಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ. ಜಿಲ್ಲೆಯಲ್ಲಿ ಆರು ಶಾಸಕರು, ಓರ್ವ ಸಂಸದ, ಈರ್ವರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಒಂದು ವೇಳೆ ನಿಮ್ಮ ಮನೆ ಬಿದ್ದಿದ್ದರೆ ಹೀಗೆಯೇ ಸುಮ್ಮನಿರುತ್ತಿದ್ದರೇ ?
ಗುಡ್ಡ ಕುಸಿತದ ಕಡೆಗೆ ಮುಖ ಮಾಡದ ಅಂಜಲಿ !
ಜಿಲ್ಲೆಯಿಂದ ಈ ಬಾರಿ ಸಂಸದ ಸ್ಥಾನಕ್ಕೆ ಆಕಾಂಕ್ಷಿಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು, ಜನರ ಬಳಿಯಲ್ಲಿ ಮತದ ಭಿಕ್ಷೆ ಕೇಳಲು ಎರಡು ತಿಂಗಳುಗಳ ಕಾಲ ಓಡಾಡಿದ್ದ ಅಂಜಲಿ ನಿಂಬಾಳ್ಕರ್ ಒಮ್ಮೆಯೂ ಶಿರೂರು ದುರಂತ ಪ್ರದೇಶಕ್ಕೆ ಭೇಟಿ ನೀಡದೇ ಇರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮತ ಕೇಳಲು ನಾಲ್ಕೈದು ಬಾರಿ ಅಂಕೋಲಾಕ್ಕೆ ಹೋಗಿದ್ದ ಅಭ್ಯರ್ಥಿ ಇದೀಗ ಜೀವ ಕಳಕೊಂಡವರ ಕುಟುಂಬಕ್ಕೆ ಕನಿಷ್ಠ ಸಾಂತ್ವನ ಹೇಳಲೂ ಬಾರದೇ ಇರುವುದು ಸ್ವಾರ್ಥ ರಾಜಕಾರಣಿಯ ಮಾನವೀಯತೆಯನ್ನು ಪ್ರಶ್ನೆ ಮಾಡುತ್ತದೆ.