Slide
Slide
Slide
previous arrow
next arrow

ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗಬೇಡಿ; ಸಿಪಿಐ ವರ್ಮಾ

300x250 AD

ಶಿರಸಿ: ಭವ್ಯ ಹಾಗೂ ಸದೃಢ ಭಾರತ ನಿರ್ಮಾಣ ಮಾಡುವ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೇ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಿಪಿಐ ಶಶಿಕಾಂತ ವರ್ಮಾ ಹೇಳಿದರು.

ಅವರು ಗುರುವಾರ ನಗರದ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಮತ್ತು ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದರು.
ವಿದ್ಯೆ ಎಂಬ ಪ್ರಯತ್ನದಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡು ಒಳ್ಳೆಯ ಉದ್ಯೋಗ ಪಡೆಯುವತ್ತ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕಾಗಿದ್ದು, ಮಾದಕ ವಸ್ತುಗಳ ವ್ಯಸನಕ್ಕೆ ಅಂಟಿಕೊಂಡರೆ ಅದರಿಂದ ಹೊರಬರುವುದು ಬಹಳ ಕಷ್ಟವಾಗಿದೆ. ವಿದ್ಯಾರ್ಥಿಗಳು ದೇಶದ ಆಸ್ತಿ, ಚಟಕ್ಕೆ ಬಲಿಯಾಗದೇ ಮಾದಕ ವ್ಯಸನಿಗಳಿಂದ ದೂರ ಉಳಿದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು. ತಂಬಾಕು ಬೆಳೆಯವಲ್ಲಿ ವಿಷ ಸರ್ಪವೂ ಹೋಗುವುದಿಲ್ಲ. ಅಂತಹ ವಸ್ತುಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿ ಜೀವನವನ್ನು ಹಾಳುಮಾಡಿಕೊಳ್ಳುವ ಸ್ಥಿತಿ ಬರುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸಸಬೇಕು ಎಂದು ಹೇಳಿದರು.
ಮಾದಕ ವಸ್ತುಗಳ ವ್ಯಾಪಾರಕ್ಕಾಗಿ ಸಾಕಷ್ಟು ಕಾಯ್ದೆಗಳಿವೆ. ಆದರೂ ಮಾದಕ ವಸ್ತುಗಳ ವ್ಯಾಪಾರ ನಡೆಯುತ್ತಿದೆ. ಮಾದಕ ವಸ್ತು ಸೇವನೆಯಿಂದ ಕಾನೂನು ಅಡಿಯಲ್ಲಿ ಸಿಲುಕಿಕೊಂಡರೆ ಸಮಾಜ, ಕುಟುಂಬ ಬಹಿಷ್ಕಾರ ಹಾಕಲಿದೆ. ಸ್ಪರ್ಧಾತ್ಮಕ ಪರೀಕ್ಷೆಯತ್ತ ವಿದ್ಯಾರ್ಥಿಗಳು ಹೆಚ್ಚ ಆಸಕ್ತಿ ವಹಿಸಬೇಕು. ಪ್ರತಿ ದಿನ ಬೆಳಿಗ್ಗೆ ಪತ್ರಿಕೆ ಓದುವುದನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದ ಅವರು, ಪತ್ರಕರ್ತರಿಗೆ ಸರ್ಕಾರವು ನೆರವು ನೀಡುವುದರ ಜತೆ ಪ್ರೋತ್ಸಾಹವನ್ನು ನೀಡುತ್ತಿದೆ. ಆದರೆ ಬೆರಳಣಿಕೆಯಷ್ಟು ಪತ್ರಕರ್ತರಿಂದ ಸಮಾಜದಲ್ಲಿ ಕೆಟ್ಟ ಹೆಸರು ಬರಲು ಕಾರಣವಾಗಿದೆ. ಅದಕ್ಕೆ ಅವಕಾಶ ನೀಡಬಾರದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಕಾಲೀನ ಆಗು-ಹೋಗುಗಳ ತಿಳುವಳಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಮೊಬೈಕ್ ಅತಿಯಾದ ಬಳಕೆಯಿಂದ ಓದುವ ಹವ್ಯಾಸ ಕಡಿಮೆಯಾಗಿದ್ದು, ತುಟುಕು ಓದಿನ ಬಗ್ಗೆ ಹೆಚ್ಚು ಆಸಕ್ತಿವಹಸುತ್ತಿದ್ದು, ಸಮಗ್ರ ಓದು ಅವಶ್ಯವಿದೆ. ವಿದ್ಯಾರ್ಥಿ ಜೀವನದಲ್ಲಿ ಸರಿಯಾಗಿ ಅಧ್ಯಯನ ಮಾಡಿದಾಗ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಜಿ.ಎಸ್.ಹೆಗಡೆ ಅಜ್ಜೀಬಳ ಅವರು ೧೯೭೪ ರಲ್ಲಿ ಜಿಲ್ಲಾ ಪತ್ರಿಕಾ ಮಂಡಳಿಯನ್ನು ಸ್ಥಾಪನೆ ಮಾಡಿ, ಪತ್ರಕರ್ತರೆಲ್ಲರೂ ಈ ಸಂಘದ ಅಡಿಯಲ್ಲಿ ಬರುವಂತೆ ಮಾಡಿದ್ದಾರೆ. ೧೨ ತಾಲೂಕುಗಳಲ್ಲಿ ಸಂಘವು ಕಾರ್ಯವ್ಯಾಪ್ತಿಯನ್ನು ಹೊಂದಿದೆ. ೨೦೨೪ ರಲ್ಲಿ ಸಂಘವು ೫೦ ವರ್ಷ ಪೂರೈಸಿದೆ. ಈ ಕಾರಣದಿಂದ ವರ್ಷಪೂರ್ತಿ ಪ್ರತಿ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಸಂಚಾರ ದಟ್ಟಣೆ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ನಗರ ಠಾಣೆಯ ಪಿ.ಎಸ್.ಐ ನಾಗಪ್ಪ.ಬಿ ಉಪನ್ಯಾಸ ನೀಡಿ, ಪತ್ರಿಕಾ ರಂಗವು ಸಮಾಜದಲ್ಲಿ ಚಾಪು ಮೂಡಿಸುತ್ತಿರುವುದಿಂದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿದ್ದು, ಭವ್ಯ ಸಮಾಜ ನಿರ್ಮಿಸಲು ಪತ್ರಿಕಾ ರಂಗ ತನ್ನದೇ ಕೊಡುಗೆ ನೀಡುತ್ತಿದೆ. ಪತ್ರಕರ್ತರು ಬರೆದು ಸಮಾಜ ತಿದ್ದಿದರೆ, ಪೊಲೀಸ್ ಇಲಾಖೆ ಬಡಿದು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದೆ. ಸಂಚಾರ ನಿಯಮಗಳು ಎಲ್ಲವೂ ತಿಳಿದರೂ ತಪ್ಪು ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಿ ಬಳಕೆಯಾಗುತ್ತಿದ್ದು, ಇದು ಕಡಿಮೆಯಾಗಬೇಕು. ೧೮ ವರ್ಷ ತುಂಬಿದ ನಂತರ ವಾಹನ ಚಾಲನಾ ಪರವಾನಿಗೆ ಪತ್ರ ಪಡೆದ ನಂತರ ವಾಹನ ಚಲಾಯಿಸಬೇಕು. ೧೮ ವರ್ಷದ ಪೂರ್ವದಲ್ಲಿ ವಾಹನ ಚಲಾಯಿಸಿದರೆ ತಂದೆ-ತಾಯಿ ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಣ ಉಳಿಸುವ ಆಸೆಯಿಂದ ಪಾಲಕರು ತಮ್ಮ ಮಕ್ಕಳನ್ನು ಆಟೋದ ಮೂಲಕ ಶಾಲೆಗೆ ಕಳುಹಿಸುತ್ತಾರೆ. ಆಟೋದಲ್ಲಿ ಮೂವರು ಪ್ರಯಾಣಿಕರು ಸೇರಿ ಚಾಲಕನಿಗೆ ಮಾತ್ರ ಪ್ರಯಾಣಿಸಬಹುದು. ಆದರೆ ಇಂದು ಆಟೋದಲ್ಲಿ ೮-೧೦ ಮಕ್ಕಳನ್ನು ತುಂಬಿಕೊಂಡು ತೆರಳುತ್ತಾರೆ. ಅಪಘಾತ ಉಂಟಾದರೆ ವಿಮೆ ದೊರೆಯುವುದಿಲ್ಲ. ಪಾಲಕರು ಇದರ ಕುರಿತು ಎಚ್ಚರವಹಿಸಬೇಕು ಎಂದ ಅವರು, ಬಸ್ಸಿನ ಟಿಕೆಟ್ ಹಣ ಉಳಿಸುವುದಕ್ಕೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗೂಡ್ಸ್ ವಾಹನಗಳಲ್ಲಿ ಮನೆಗೆ ತೆರಳುತ್ತಾರೆ. ಗೂಡ್ಸ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನು ಅಪರಾಧ. ಸಂವಿಧಾನದಲ್ಲಿ ಹಕ್ಕುಗಳ ಜತೆ ಕರ್ತವ್ಯಗಳು ಇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಪಾಟೀಲ ಮಾತನಾಡಿ, ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ಅವರ ಕುಟುಂಬ ೨೪ ಗಂಟೆ ಅಪಾಯದಲ್ಲಿದೆ. ಜನಪ್ರತಿನಿಧಿಗಳೊಂದಿಗೆ ಪತ್ರಕರ್ತರು ಸಮಾಜ ಸೇವೆ ಮಾಡುತ್ತಿದ್ದಾರೆ. ಶಾಸಕರಿಗೆ, ಸಚಿವರಿಗೆ ಸರ್ಕಾರದ ಸೌಲಭ್ಯವಿದೆ. ಆದರೆ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯಗಳಿಲ್ಲ. ಸಾಮಾಜಿಕ ಜವಾಬ್ದಾರಿ ಪತ್ರಕರ್ತರ ಮೇಲಿದ್ದು, ಅಧ್ಯಯನ ಮೂಲಕ ನಿಜಾಂಶವನ್ನು ಸಮಾಜಕ್ಕೆ ನೀಡಬೇಕು ಎಂದರು.

ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಸೈನಿಕರು ದೇಶದ ಗಡಿಯನ್ನು ಕಾಯುತ್ತಿದ್ದರೆ, ಪೊಲೀಸರು ದೇಶದ ಒಳಗಡೆಯ ಭದ್ರೆತನ್ನು ನೋಡಿಕೊಳ್ಳುತ್ತಾರೆ. ಅವರಂತೆ ದಿನದ ಇಪ್ಪತ್ನಾಲ್ಕು ಘಂಟೆಗಳು ಕಾರ್ಯನಿರ್ವಹಿಸುವ ಪತ್ರಕರ್ತರು ಸಮಾಜದಲ್ಲಿ ನಡೆಯುವ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಾರೆ. ಸೈನಿಕರು, ಪೊಲೀಸರು ಹಾಗೂ ಪತ್ರಕರ್ತರು ಸಮಾಜಕ್ಕೆ ಬಹಳ ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ಟ ಬೆಳಖಂಡ ಮಾತನಾಡಿ, ಹಿರಿಯರ ಮಾರ್ಗದರ್ಶನದಿಂದ ಶಿರಸಿಯ ಪತ್ರಿಕೋದ್ಯಮ ಒಳ್ಳೆಯ ಹೆಸರು ಹೊಂದಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ಜಿಲ್ಲಾ ಪತ್ರಿಕಾ ಮಂಡಳಿ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಹಿರಿಯರಾದ ಸತ್ಯನಾರಾಯಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ವಿನುತಾ ಹೆಗಡೆ ಸ್ವಾಗತಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ನಿರೂಪಿಸಿದರು. ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು.

ಕೋಟ್:
ಬಡತನ ಮತ್ತು ಹಸಿವು ಕಲಿಸುವ ವಿದ್ಯೆಯನ್ನು ಯಾವ ವಿಶ್ವವಿದ್ಯಾಲಯದ ಕಲಿಸಲು ಸಾಧ್ಯವಿಲ್ಲ. ಕಷ್ಟಪಟ್ಟು ಓದಿನಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು.
-ಶಶಿಕಾಂತ ವರ್ಮಾ, ಸಿಪಿಐ ಶಿರಸಿ

300x250 AD

ಕೋಟ್:
ಪತ್ರಿಕೋದ್ಯಮದಲ್ಲಿ ಗೌರವ ಸಿಗಬೇಕಾದರೆ ಪತ್ರಕರ್ತರು ತಮ್ಮ ಜೀವನದಲ್ಲಿ ನೈತಿಕತೆ ಬೆಳೆಸಿಕೊಳ್ಳಬೇಕು.
-ಜಿ.ಸುಬ್ರಾಯ ಭಟ್ಟ ಬಕ್ಕಳ ಜಿಲ್ಲಾಧ್ಯಕ್ಷ

ಕೋಟ್:
ಅತಿ ಹೆಚ್ಚು ಪ್ರಾಣಾಪಾಯವು ಹೆಲ್ಮೆಟ್ ಧರಿಸದ ಕಾರಣ ಸಂಭವಿಸುತ್ತಿದ್ದು, ಸಂಚಾರ ನಿಯಮ ಪಾಲಿಸುವುದರ ಜತೆ ಹೆಲ್ಮೆಟ್ ಧರಿಸುವುದು ಕಡ್ಡಾಯ. ಮೊಬೈಲ್ ಬಳಕೆ ಮಾಡಿ ವಾಹನ ಚಲಾಯಿಸುವುದು ತಪ್ಪು. ಸಂಚಾರ ನಿಯಮ ಉಲ್ಲಂಘನೆ ಮಾಡಿ ವಾಹನ ಚಲಾಯಿಸುವ ಚಾಲಕರ ಲೈಸೆನ್ಸ್ ರದ್ದು ಮಾಡಲು ಪೊಲೀಸ್ ಇಲಾಖೆಗೆ ಅವಕಾಶವಿದೆ. ಇದಕ್ಕೆ ಅವಕಾಶ ನೀಡದೇ ಸಂಚಾರ ನಿಯಮ ಪಾಲಿಸಿ, ಸುರಕ್ಷತೆಯಿಂದ ವಾಹನ ಚಲಾಯಿಸಬೇಕು.
-ನಾಗಪ್ಪ.ಬಿ. ನಗರ ಠಾಣೆ ಪೊಲೀಸ್ ಉಪ ನಿರೀಕ್ಷಕ

Share This
300x250 AD
300x250 AD
300x250 AD
Back to top