ಜೋಯಿಡಾ : ತಾಲೂಕು ಕೇಂದ್ರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಾಲಯದ ಗೋಡೆ ಬಿರುಕು ಬಿಟ್ಟು, ಸೋರುತ್ತಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಈ ಕಟ್ಟಡ ಕಛೇರಿ ಕೆಲಸಕ್ಕೆ ಯೋಗ್ಯವೇ ಅಥವಾ ಸ್ಥಳಾಂತರಿಸಬೇಕೇ ಎನ್ನುವುದನ್ನು ತಾಲೂಕು ಪ್ರಕೃತಿ ವಿಕೋಪ ಪರಿಹಾರ ತಂಡ ವೀಕ್ಷಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿಗಳ ಕೊಠಡಿ ಸಂಪೂರ್ಣ ಬಿರುಕು ಬಿಟ್ಟು ಸೋರುತ್ತಿದ್ದರೆ, ಸಿಬ್ಬಂದಿಗಳ ಕೊಠಡಿಯ ಮಧ್ಯದ ಗೋಡೆ ನೆಲದಿಂದ ಮೇಲ್ಛಾವಣಿವರೆಗೂ ಬಿರುಕು ಬಿಟ್ಟಿದೆ.
ಜೋಯಿಡಾದಲ್ಲಿ ನಿತ್ಯ ಸುರಿವ ಧಾರಾಕಾರದ ಮಳೆಗೆ ಈ ಸೋರುತ್ತಿರುವ ಕಟ್ಟಡದಲ್ಲಿ ಭಯದಿಂದಲೇ ಸಿಬ್ಬಂದಿಗಳು ಕೆಲಸ ನಿರ್ವಹಿಸುವಂತಾಗಿದೆ.
ವ್ಯಾಪಕ ಮಳೆಯ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಿಸಿರುವ ಜಿಲ್ಲಾಧಿಕಾರಿಗಳು, ಜಿಲ್ಲೆಯ ಯಾವುದೆ ಜನವಸತಿ ಕಟ್ಟಡ, ಕಛೇರಿಗಳು, ಮನೆಗಳು ಬಿರುಕು ಬಿಟ್ಟಿದ್ದರೆ ಅಥವಾ ಅಪಾಯ ಸೂಚಕವಾಗಿದ್ದರೆ ಇದನ್ನು ಸ್ಥಳಿಯ ತಾಲೂಕಾಧಿಕಾರಿಗಳು, ಪಿ.ಡಿ.ಓ.ಗಳು, ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲಿಸಿ ಅಂಥಹ ಕಟ್ಟಡ, ಮನೆಯಿಂದ ಜನರನ್ನು ಬೇರೆಡೆ ಸ್ಥಳಾಂತರ ಮಾಡಿ ಜೀವ ರಕ್ಷಣೆ ಕಾರ್ಯಮಾಡಬೇಕೆಂದು ಆದೇಶಿಸಿದ್ದಾರೆ. ಇದಕ್ಕೆ ತಪ್ಪಿ ಅಪಾಯ ಸಂಭವಿಸಿದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅಮಾನತ್ತು ಮಾಡುವ ಎಚ್ಚರಿಕೆಯನ್ನು ಕೂಡಾ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.