ಸರ್ಕಾರದ ಪರಿಹಾರ ಜೊತೆ ವೈಯಕ್ತಿಕ ಸಹಾಯಹಸ್ತ ಚಾಚಿದ ಶಾಸಕ
ಸಿದ್ದಾಪುರ: ಭಾರಿ ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾದ ತಾಲೂಕಿನ ವಿವಿಧ ಪ್ರದೇಶಗಳಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದ ಚೆಕ್ ಜತೆಗೆ ವೈಯಕ್ತಿಕ ಸಹಾಯ ನೀಡಿದರು.
ಮಳೆಯಿಂದ ಸಂಪೂರ್ಣ ಹಾನಿಯಾದ ಸಿದ್ದಾಪುರ ಪಟ್ಟಣದ ರವೀಂದ್ರನಗರದ ಸರೋಜಾ ಮಾಣಿಕ್ಯಸ್ವಾಮಿ ಇವರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಫಲಾನುಭವಿಗೆ ಪರಿಹಾರದ ಚೆಕ್ ಹಾಗೂ ವೈಯಕ್ತಿಕ ಸಹಾಯ ನೀಡಿ ಆದ್ಯತೆ ಮೇರೆಗೆ ಸರ್ಕಾರದ ವಸತಿ ಯೋಜನೆಯಡಿ ಮನೆ ಮಂಜೂರಿ ಮಾಡುವಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗೆ ಸೂಚಿಸಿದರು.
ತಾಲೂಕಿನ ಕಲ್ಯಾಣಪುರದಲ್ಲಿ ನೆರೆಹಾವಳಿಯಿಂದ ಐದು ಕುಟುಂಬಗಳಿಗೆ ವಾಸಕ್ಕೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ಅಕ್ಕುಂಜಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿ ಫಲಾನುಭವಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು.
ನಿಪ್ಲಿಯ ಜಲಪಾತ ವೀಕ್ಷಿಸಿ ಪ್ರವಾಸಿಗರು ನೀರಿಗಿಳಿಯದಂತೆ ಸೂಕ್ರ ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಗ್ರಾಪಂ ಪಿಡಿಓಗೆ ಸೂಚಿಸಿದರು. ಇಟಗಿ ಪಂಚಾಯ್ತಿ ವ್ಯಾಪ್ತಿಯ ಹರ್ಕನಳ್ಳಿಯ ಮಹಾಬಲೇಶ್ವರ ರಾಮಾ ನಾಯ್ಕ ಇವರ ಮನೆ ಹತ್ತಿರ ಧರೆ ಕುಸಿದ ಪ್ರದೇಶ ವೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗುಲ್ಲುಮನೆಯಲ್ಲಿ ಕೊಟ್ಟಿಗೆಯ ಮೇಲೆ ಮರ ಬಿದ್ದು ಎರಡು ಜಾನುವಾರು ಮೃತಪಟ್ಟ ಶಿವಾನಂದ ನಾರಾಯಣ ನಾಯ್ಕ ಇವರ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಸರ್ಕಾರದ ಪರಿಹಾರದ ಚೆಕ್ ಜತೆ ವೈಯಕ್ತಿಕವಾಗಿ ಧನ ಸಹಾಯ ನೀಡಿದರು.
ನಂತರ ಇಟಗಿಯ ಕಾಂತಿವನದ ಕೆರೆದೇವಿ ಚೌಡಾ ಹಸ್ಲರ್, ಕೊಡ್ತಗಣಿಯ ಕೃಷ್ಣ ತಿಮ್ಮ ಹಸ್ಲರ ಇವರ ವಾಸದ ಮನೆ ಹಾನಿಯಾಗಿರುವುದನ್ನು ವೀಕ್ಷಿಸಿ ಚೆಕ್ ವಿತರಿಸಿ ವೈಯಕ್ತಿಕ ಸಹಾಯ ನೀಡಿ ಧೈರ್ಯ ತುಂಬಿದರು. ಸಿದ್ದಾಪುರ ತಾಲೂಕಿನ ವಾಜಗೋಡ ಪಂಚಾಯ್ತಿ ವ್ಯಾಪ್ತಿಯ ಐಸೂರಿನಲ್ಲಿ ಮಳೆಯಿಂದ ಹಾನಿಯಾದ ದ್ಯಾವರಿ ತಿಮ್ಮ ನಾಯ್ಕ ಅವರ ಮನೆಯನ್ನು ವೀಕ್ಷಿಸಿ ಸರ್ಕಾರದ ಚೆಕ್ ವಿತರಿಸಿ ವೈಯಕ್ತಿಕ ಸಹಾಯ ನೀಡಿದರು. ದೊಡ್ಮನೆ ಪಂಚಾಯ್ತಿ ವ್ಯಾಪ್ತಿಯ ಹಸ್ವಿಗುಳಿಯ ವೆಂಕಟ್ರಮಣ ತಿಮ್ಮ ನಾಯ್ಕ ಅವರ ಮನೆ ಬಳಿ ಕುಸಿದ ಧರೆ ವೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಕೆರೆಕುಳಿಯ ಮಂಜುನಾಥ ನಾರಾಯಣ ಗೌಡ ಅವರ ವಾಸದ ಮನೆಗೆ ಹಾನಿಯಾಗಿರುವುದನ್ನು ಪರಿಶೀಲಿಸಿ ಸರ್ಕಾರದ ಚೆಕ್ ಜತೆಗೆ ವೈಯಕ್ತಿಕ ಸಹಾಯ ನೀಡಿದರು.
ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಭಂಡಾರಕೇರಿ-ಮಲ್ಕಾರ್ ಘಟ್ಟದ ರಸ್ತೆ ಪಕ್ಕ ಕುಸಿದ ಧರೆ, ಹೆಗ್ಗರಣಿ ಪಂಚಾಯ್ತಿ ವ್ಯಾಪ್ತಿಯ ಹೆಗ್ಗರಣಿ ಬಸ್ ತಂಗುದಾಣದ ಬಳಿ ಧರೆ ಕುಸಿದಿರುವುದನ್ನು ವೀಕ್ಷಿಸಿ ತಕ್ಷಣ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಣಲೆಬೈಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆರೂರ ಉರ್ದು ಶಾಲೆ, ನಾಡ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ ಅಬ್ದುಲ್ಲಾ ಹೆರೂರ ಇವರ ಮನೆ ಬಳಿ ಕುಸಿದ ಧರೆ ವೀಕ್ಷಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದರು.
ಈ ವೇಳೆ ತಹಶಿಲ್ದಾರ ಎಂ.ಆರ್.ಕುಲಕರ್ಣಿ, ತಾಪಂ ಇಓ ದೇವರಾಜ ಹಿತ್ತಲಕೊಪ್ಪ, ಸಿಪಿಐ ಕುಮಾರ ಕೆ, ಪ್ರಮುಖರಾದ ವಿ.ಎನ್.ನಾಯ್ಕ, ಬಾಬು ನಾಯ್ಕ, ಉಮೇಶ ನಾಯ್ಕ ಕಡಕೇರಿ, ಎನ್.ಟಿ.ನಾಯ್ಕ, ಸಿ.ಆರ್.ನಾಯ್ಕ, ಎಸ್.ಕೆ.ನಾಯ್ಕ ಕಡಕೇರಿ, ಅಣ್ಣಪ್ಪ ನಾಯ್ಕ ಶಿರಳಗಿ, ಜಿ.ಟಿ.ನಾಯ್ಕ, ಮಂಜುನಾಥ ನಾಯ್ಕ ತ್ಯಾರ್ಸಿ, ಹರೀಶ ನಾಯ್ಕ ಹಸ್ವಿಗುಳಿ ಮತ್ತಿತರರು ಉಪಸ್ಥಿತರಿದ್ದರು.