ಯಲ್ಲಾಪುರ :ಜಿಲ್ಲೆಯ ಯುವಕ ಯುವತಿಯರಿಗೆ ಸ್ವ-ಉದ್ಯೋಗಾವಕಾಶಕ್ಕೆ ಪೂರಕವಾದ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಗ್ರೀನ್ ಕೇರ್ ಸಂಸ್ಥೆ ಹಮ್ಮಿಕೊಂಡಿದ್ದು, ಜು.22ರಂದು ಪಟ್ಟಣದ ಎ.ಪಿ.ಎಂ.ಸಿ ಯಾರ್ಡ್‌ನಲ್ಲಿನ ಅಡಿಕೆ ಭವನದಲ್ಲಿ ಉದ್ಘಾಟನೆಗೊಳ್ಳಲಿದೆ.
ಸಂಸ್ಥೆಯು ‘ಪ್ರಾಜೆಕ್ಟ್ ಕೌಶಲ್ಯ ವಿಕಾಸ’ ಎಂಬ ಯೋಜನೆಯನ್ನು ರೂಪಿಸಿದೆ. ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಸೂಕ್ತ ಉದ್ಯೋಗಾವಕಾಶಗಳನ್ನು ಪಡೆಯುವುದಕ್ಕೆ ಇಂದಿನ ಕಾಲಮಾನಕ್ಕೆ ಅಗತ್ಯವಿರುವ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಉಚಿತವಾಗಿ ನೀಡಲು ಬ್ಯೂಟಿಶಿಯನ್ ಹಾಗೂ ಬೇಸಿಕ್ ಪ್ಯಾಷನ್ ಡಿಸೈನಿಂಗ್ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಕಾರ್ಯಕ್ರಮವನ್ನು ಯಲ್ಲಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಡಿ ಜನಾರ್ಧನ ಉದ್ಘಾಟಿಸುವರು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ ಆರ್.ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರೀನ್ ಕೇರ್ ಸಂಸ್ಥೆಯು 2021 ರಿಂದ ಪ್ರಾರಂಭವಾಗಿ ಯಲ್ಲಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ, ವ್ಯಸನಮುಕ್ತ ಜಾಗೃತಿ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕಳೆದ 4 ವರ್ಷಗಳಿಂದ ಈವರೆಗೆ ಸುಮಾರು 35ಕ್ಕೂ ಹೆಚ್ಚು ಆರೋಗ್ಯ ಜಾಗೃತಿ ಹಾಗೂ ತಪಾಸಣಾ ಶಿಬಿರಗಳನ್ನು ನಡೆಸಿದೆ. ಯಲ್ಲಾಪುರ ತಾಲೂಕು ಆಸ್ಪತ್ರೆ ಸಹಯೋಗದಲ್ಲಿ ಉಚಿತ ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ, ರೋಟರಿ ಸಂಸ್ಥೆ ಸಹಯೋಗದಲ್ಲಿ ಉಚಿತವಾಗಿ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಿ ಜಿಲ್ಲೆಯ 650ಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನೀಡಿ ಉಚಿತ ಕನ್ನಡಕವನ್ನು ವಿತರಿಸಲಾಗಿದೆ. 25ಕ್ಕೂ ಹೆಚ್ಚು ಶಾಲೆಗಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ವಿತರಿಸಿ ಜಾಗೃತಿ ಮೂಡಿಸಿದೆ. ಹಿರಿಯ ನಾಗರಿಕರ ಆರೈಕೆಗಾಗಿ ವೃದ್ಧಾಶ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.