ಜಿಲ್ಲೆಯಲ್ಲಿ ಅಬ್ಬರಿಸಿ, ಬೊಬ್ಬಿರಿದ ವರುಣರಾಯ | ನಿರಾಶ್ರಿತರಿಗೆ ಕಾಳಜಿ ಕೇಂದ್ರಕ್ಕೆ ರವಾನೆ
ಕುಮಟಾ: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡಕುಸಿತ ಉಂಟಾದ ಬೆನ್ನಲ್ಲೇ ಗುರುವಾರ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ.
ಗುರುವಾರ ಬೆಳಗಿನಜಾವ 4 ಗಂಟೆಯ ವೇಳೆಗೆ ಬರ್ಗಿ ಸಮೀಪ ಗುಡ್ಡ ಕುಸಿದು ಹೆದ್ದಾರಿಗೆ ಬಿದ್ದಿದೆ. ಪೊಲೀಸರು ಹಾಗೂ ಜಿಲ್ಲಾಡಳಿತದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಕೈಗೊಂಡರು. ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಸುಮಾರು ಆರು ತಾಸುಗಳ ಕಾರ್ಯಾಚರಣೆಯ ನಂತರ ಮಣ್ಣನ್ನು ಪಕ್ಕಕ್ಕೆ ಸರಿಸಲಾಗಿದೆ ಎಂದು ತಿಳಿದುಬಂದಿದೆ. ಕೆಲ ಗಂಟೆಗಳ ಕಾಲ ಅಂಕೋಲಾ ಕುಮಟಾ ಬಳಿ ವಾಹನ ಸಂಚಾರ ಬಂದ್ ಆಗಿತ್ತು.
ಜೊತೆಗೆ ಗುರುವಾರವೂ ವರುಣನ ರುದ್ರ ನರ್ತನ ಮುಂದುವರೆದಿದೆ. ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಕ್ಷರಶಃ ಅಸ್ತವ್ಯಸ್ತವಾಗಿದೆ. ಒಂದೆಡೆ ಗುಡ್ಡ ಕುಸಿತಗಳು ಸಂಭವಿಸುತ್ತಿದ್ದರೆ ಇನ್ನೊಂದೆಡೆ ನದಿ ಪಾತ್ರದ ಜನರು ನೆಲೆ ಕಾಣದೆ ವಿಲವಿಲ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುರಿವ ಪ್ರತಿಯೊಂದೂ ಹನಿಯೂ ಚಿಂತೆಯನ್ನು ತಂದುಡುತ್ತಿದ್ದು, ಮನೆಯಲ್ಲಿ ನಿಶ್ಚಿಂತೆಯಾಗಿ ಮಲಗಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ನಿರಾಶ್ರಿತರಿಗೆ ಕಾಳಜಿ ಕೇಂದ್ರ ಸ್ಥಾಪನೆ:
ತಾಲೂಕಿನಲ್ಲಿ ಗುರುವಾರ ಮತ್ತೆ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು, ಊರಕೇರಿ ಶಾಲೆಯಲ್ಲಿ ಕೇಂದ್ರ ನಡೆದಿದೆ. ಕುಮಟಾದಲ್ಲಿ 128. 3 ಮಿ.ಮೀ, ಕತಗಾಲದಲ್ಲಿ 152.4 ಮಿ.ಮೀ, ಗೋಕರ್ಣದಲ್ಲಿ 95.2 ಮಿ.ಮೀ ಮಳೆಯಾಗಿದೆ. ನಾಲ್ಕು ಮನೆಗಳಿಗೆ ಹಾನಿಯಾಗಿದ್ದು ಭಾಗಶಃ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ. ಒಟ್ಟು ಎರಡು ಲಕ್ಷ ರೂಪಾಯಿ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟು 24 ಕುಟುಂಬದ 46 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಧಾರೇಶ್ವರದಲ್ಲಿಯೂ ಕುಸಿದ ಗುಡ್ಡ :
ಕಳೆದೆರಡು ದಿನದಿಂದ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಧಾರೇಶ್ವರದ ಹತ್ತಿರ ಗುಡ್ಡ ಕುಸಿಯುವ ಭೀತಿಯಿದೆ. ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿಕೊಂಡಿರುವ ಬೆತ್ತಗೇರಿ ಸಮೀಪದ ಗುಡ್ಡ ನಿಧಾನಕ್ಕೆ ಕುಸಿಯಲು ಪ್ರಾರಂಭಿಸಿದ್ದು, ಅಪಾಯದ ಮುನ್ಸೂಚನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ಸಹಸ್ರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಾ ಆಡಳಿತ ಆ ರಸ್ತೆಯಲ್ಲಿ ಜನರು ಓಡಾಡದಂತೆ ವ್ಯವಸ್ಥೆ ಮಾಡಿದ್ದು, ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಏಳು ವರ್ಷದ ಹಿಂದಿನ ನೆನಪು :
ಏಳು ವರ್ಷದ ಹಿಂದೆ, 2017ರಲ್ಲಿ ತಾಲೂಕಿನ ದೀವಗಿಯಲ್ಲಿ ನಡೆದ ಬಹುದೊಡ್ಡ ಗುಡ್ಡ ಕುಸಿತದಿಂದಾಗಿ ಹತ್ತು ಜನ ಮಹಿಳೆಯರಿಗೆ ಗಂಭೀರವಾಗಿ ಪೆಟ್ಟಾಗಿದ್ದರ ಜೊತೆಗೆ, ಮೂವರು ಮಕ್ಕಳು ಸಾವನ್ನಪ್ಪಿದ ಘಟನೆ ನಡೆದಿತ್ತು.