ಹೊನ್ನಾವರ: ಕಳೆದ ಒಂಭತ್ತು ದಿನಗಳಿಂದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಇಲ್ಲಿನ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನ ನಡೆಸುತ್ತಿದ್ದ ನವ ದಿನ ಶ್ರೀರಾಮ ಚರಿತೆ ತಾಳಮದ್ದಲೆ ಸರಯೂತೀರದಲ್ಲಿ ಶ್ರೀರಾಮನ ನಿರ್ಯಾಣದ ಮೂಲಕ ಸಮಾರೋಪಗೊಂಡಿತು.
ಭಾನುವಾರ ತಾಲೂಕಿನ ಕರಿಕಾನ ಅಮ್ಮನ ಸನ್ನಿಧಿಯಲ್ಲಿ ನಡೆದ ತಾಳಮದ್ದಲೆಯಲ್ಲಿ ಸೆಲ್ಕೋ ಇಂಡಿಯಾದದ ಸಿಇಓ, ಅರ್ಥದಾರಿ ಮೋಹನ ಭಾಸ್ಕರ ಹೆಗಡೆ ಕರ್ಕಿ ಹೆರವಟ್ಟ ಶ್ರೀರಾಮನ ಪಾತ್ರ ನಿರ್ವಹಿಸಿದರು. ನಿರ್ಯಾಣದ ರಾಮನ ಪ್ರೌಢಿಮೆ ಮೆರೆದರು. ಕಾಲಪುರುಷನ ಹಾಗೂ ಲಕ್ಷ್ಮಣನ ಜೊತೆಗಿನ ಸಂವಾದ ಭಾವನಾತ್ಮಕವಾಗಿ ನಿಂತಿತು. ಪ್ರೇಕ್ಷಕರ ಮನಸುಗಳೂ ಕರಗಿದವು.
ಕಾಲಪುರುಷನಾಗಿ ಸುಬ್ರಹ್ಮಣ್ಯ ಮೂರೂರು, ಲಕ್ಷ್ಮಣನಾಗಿ ಜಿ.ಕೆ.ಹೆಗಡೆ ಹರಿಕೇರಿ, ಧುರ್ವಾಸನಾಗಿ ರಾಧಾಕೃಷ್ಣ ಕಲ್ಚಾರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಹಿಮ್ಮೇಳದಲ್ಲಿ ಗೋಪಾಲಕೃಷ್ಣ ಭಟ್ಟ ಜೋಗಿನಮನೆ, ಮೃದಂಗದಲ್ಲಿ ದತ್ತಾರಾಮ ಭಟ್ಟ ಸೆಲ್ಕೊ, ಚಂಡೆ ಶಿವಾನಂದ ಕೋಟ, ಮಯೂರ ಹರಿಕೇರಿ ಇದ್ದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಪ್ತಕದ ಮುಖ್ಯಸ್ಥ ಜಿ.ಎಸ್ ಹೆಗಡೆ ಮಾತನಾಡಿ ನಾಟ್ಯಶ್ರೀಯ ಕಾರ್ಯವನ್ನು ಶ್ಲಾಘಿಸಿದರಲ್ಲದೆ ಶ್ರೀರಾಮನ ಪಾತ್ರದಲ್ಲಿ ಒಂಬತ್ತು ದಿನ ಅರ್ಥಧಾರಿಯಾಗಿ ಶ್ರೀರಾಮನ ಹುಟ್ಟಿನಿಂದ ನಿರ್ಯಾಣದವರೆಗಿನ ಕಥೆಯನ್ನು ಕಟ್ಟಿಕೊಟ್ಟಿದ್ದು ಒಂದು ದಾಖಲೆಯೇ ಸರಿ ಎಂದು ನುಡಿದರು.ವೇದಿಕೆಯಲ್ಲಿ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ಟ, ಪ್ರತಿಷ್ಠಾನದ ಗೌರವ ಅಧ್ಯಕ್ಷ ಪ್ರೋ. ಎಸ್. ಶಂಭು ಭಟ್ಟ, ಅಧ್ಯಕ್ಷ ಎಸ್.ಜಿ.ಭಟ್ಟ ಕಬ್ಬಿನಗದ್ದೆ ಮೂರುರು ಸುಬ್ರಾಯ ಭಟ್ಟ ಇದ್ದರು. ಮೋಹನ ಭಾಸ್ಕರ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಮ ಹನುಮರ ಭಕ್ತನಾದ ತಮಗೆ ಈ ಕಾರ್ಯದಿಂದ ಅಪರಿಮಿತ ಆನಂದವಾಗಿದೆ.ಶ್ರೀ ರಾಮನ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕೃಪೆಯಿಂದ ಸಂಕಲ್ಪಿಸಿದ ಕಾರ್ಯ ನಿರ್ವಿಘ್ನವಾಗಿ ಸಾಗಿ ಪಾಲ್ಗೊಂಡ ಎಲ್ಲರಲ್ಲೂ ಸಂತೃಪ್ತ ಭಾವ ಕಂಡುದಾಗಿ ನುಡಿದರು. ಇದೇ ವೇಳೆ ಭಾರತೀಯ ವಿಕಾಸ ಟ್ರಸ್ಟ್ ನ ಜಗದೀಶ ಪೈ ಮಣಿಪಾಲ ಹಾಗೂ ಯಕ್ಷ ಶಾಲ್ಮಲಾದಿಂದ ನಾಗರಾಜ ಜೋಶಿ ಸೋಂದಾ ಮೋಹನ ಹೆಗಡೆ ಅವರನ್ನು ಗೌರವಿಸಿದರು. ದೇವಸ್ತಾನದ ಅರ್ಚಕರು ಮೋಹನರ ತಾಯಿ ಪಾರ್ವತಿ ಭಾಸ್ಕರ ಹೆಗಡೆಯವರನ್ನು ಸೀರೆಕಣದೊಂದಿಗೆ ಪ್ರಸಾದದ ನೀಡಿ ಹರಿಸಿದರು.
ಯಕ್ಷಗಾನ ತಾಳಮದ್ದಲೆ ಮುಂದಿನ ಜನಾಂಗಕ್ಕೆ ತಲುಪಿಸಬೇಕಾಗಿದೆ. ಮಕ್ಕಳಿಗೆ, ಮನೆಯ ಮಂದಿ ಇಂತಹದನ್ನು ತೋರಿಸದೇ ಹೋದರೆ ಕಳೆದು ಹೋಗುವ ಆತಂಕ ಇದೆ.
-ಮೋಹನ ಭಾಸ್ಕರ ಹೆಗಡೆ, ಹೆರವಟ್ಟ ಸರಣಿಯ ಪ್ರಧಾನ ಅರ್ಥದಾರಿ